ಬೆಂಗಳೂರು, ಜ.22 www.bengaluruwire.com : ವೇಗವಾಗಿ ಬದಲಾಗುತ್ತಿರುವ ಜಾಗತಿಕ ಉದ್ಯಮ ವಲಯಕ್ಕೆ ಪೂರಕವಾಗಿ ನಿರ್ವಹಣಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಶಿಕ್ಷಣ ಮತ್ತು ಉದ್ಯಮ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಬಿಎಮ್‌ಎ) ನಗರದಲ್ಲಿ ಆಯೋಜಿಸಿದ್ದ “ಎಐ ಮತ್ತು ನಿರ್ವಹಣಾ ಶಿಕ್ಷಣದ ಭವಿಷ್ಯ” ಕುರಿತ ವಿಚಾರ ಸಂಕಿರಣದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಬಿಎಮ್‌ಎ ಅಧ್ಯಕ್ಷ ಪಂಕಜ್ ಕುಮಾರ್ ಪಾಂಡೆ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸುಮಾರು 120ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಉಪ ಕುಲಪತಿ ಪ್ರೊ. ವಿದ್ಯಾಶಂಕರ ಎಸ್., ವಿಶ್ವವಿದ್ಯಾಲಯಗಳು ಉದಯೋನ್ಮುಖ ಎಐ ಅಗತ್ಯಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ವಿವರಿಸಿದರು. “ಶಿಕ್ಷಣ ಸಂಸ್ಥೆಗಳು ಹಳೆಯ ಪಠ್ಯಕ್ರಮಕ್ಕೆ ಅಂಟಿಕೊಳ್ಳದೆ, ಎಐ ಅಗತ್ಯಗಳಿಗೆ ತ್ವರಿತವಾಗಿ ಒಗ್ಗಿಕೊಳ್ಳಬೇಕು,” ಎಂದು ಅವರು ಪ್ರತಿಪಾದಿಸಿದರು.
ಸೈವೇರ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಶ್ವಿನ್ ಹೆಗಡೆ ಕಾರ್ಕಳ ಮಾತನಾಡಿ, ಜಾಗತಿಕವಾಗಿ ಕೌಶಲ್ಯದ ಮಾನದಂಡಗಳು ಬದಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ಸಜ್ಜಾಗಬೇಕಿದೆ ಎಂದರು. ಬಿಎಂಎ ಹಿರಿಯ ಉಪಾಧ್ಯಕ್ಷ ಡಾ. ಶಿವಶಂಕರ ಎನ್. ಮಾತನಾಡಿ, ಶೈಕ್ಷಣಿಕ ವಲಯ ಮತ್ತು ಕೈಗಾರಿಕೆಗಳ ನಡುವೆ ಕೊಂಡಿಯಾಗಿ ಬಿಎಮ್‌ಎ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಕಾಲೇಜುಗಳು ಬಿಎಮ್‌ಎ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪ್ಯಾನಲ್ ಚರ್ಚೆ ಮತ್ತು ನಿರ್ಣಯಗಳು:
ಬಯೋಕಾನ್, ರೋಬೋಸಾಫ್ಟ್ ಮತ್ತು ಕ್ವಾಂಟೆಕ್‌ನಂತಹ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದ ಸಂವಾದದಲ್ಲಿ, ಎಐ ಸಾಕ್ಷರತೆ, ನೈತಿಕತೆ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಮಹತ್ವದ ಬಗ್ಗೆ ಚರ್ಚಿಸಲಾಯಿತು.
ಅಂತಿಮವಾಗಿ, ಬಿಎಮ್‌ಎ ನಿರ್ದೇಶಕರಾದ ಎನ್. ಡಿ. ವೀರಣ್ಣ ಗೌಡ ಅವರು ಪಠ್ಯಕ್ರಮ ಮರುವಿನ್ಯಾಸ, ಅಧ್ಯಾಪಕರ ಕೌಶಲ್ಯಾಭಿವೃದ್ಧಿ ಮತ್ತು ಇಂಟರ್ನ್‌ಶಿಪ್‌ಗಳಿಗೆ ಬೆಂಬಲ ನೀಡುವ ಕ್ರಿಯಾಯೋಜನೆಯನ್ನು ಪ್ರಕಟಿಸಿದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















