ಬೆಂಗಳೂರು, ಜ.20 www.bengaluruwire.com : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿರುವ ಡಿಜಿಪಿ ದರ್ಜೆಯ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರದು ಎನ್ನಲಾದ ಆಕ್ಷೇಪಾರ್ಹ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ, ರಾಮಚಂದ್ರ ರಾವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ (Suspend) ಆದೇಶ ಹೊರಡಿಸಿದೆ.
ಬೆಂಗಳೂರಿನ ಕಚೇರಿಯಲ್ಲೇ ಮಹಿಳೆಯೊಬ್ಬರ ಜೊತೆ ರಾಮಚಂದ್ರ ರಾವ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದು ಹಳೆಯ ವಿಡಿಯೋ ಎಂದು ಹೇಳಲಾಗಿದ್ದರೂ, ಸಾರ್ವಜನಿಕ ವಲಯದಲ್ಲಿ ಮತ್ತು ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತರುವಂತಿದೆ ಎಂಬ ಚರ್ಚೆಗಳು ಆರಂಭವಾಗಿದ್ದವು. ದೃಶ್ಯಾವಳಿಗಳಲ್ಲಿ ಕಂಡುಬಂದಿರುವ ವರ್ತನೆ ಅಧಿಕಾರಿಯ ನಡತೆಗೆ ವಿರುದ್ಧವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಮುಖ್ಯಮಂತ್ರಿಗಳ ಖಡಕ್ ಸಂದೇಶ:

ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ವಿಷಯ ನನ್ನ ಗಮನಕ್ಕೆ ಮುಂಜಾನೆಯೇ ಬಂದಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಷ್ಟೇ ಉನ್ನತ ಮಟ್ಟದ ಅಧಿಕಾರಿಯಾಗಿದ್ದರೂ, ತಪ್ಪು ಮಾಡಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತಕ್ಷಣವೇ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಲಾಗುವುದು,” ಎಂದು ಸ್ಪಷ್ಟಪಡಿಸಿದ್ದರು.
ವೈರಲ್ ವೀಡಿಯೊಗೆ ಸಂಬಂಧಿಸಿದ ಆರೋಪ ನಿರಾಕರಣೆ:
ವೈರಲ್ ವೀಡಿಯೊಗೆ ಸಂಬಂಧಿಸಿದ ಆರೋಪಗಳನ್ನು ಡಾ.ಕೆ ರಾಮಚಂದ್ರ ರಾವ್ ಸೋಮವಾರ ನಿರಾಕರಿಸಿದ್ದರು, ದೃಶ್ಯಗಳನ್ನು ಹೇಗೆ ಅಥವಾ ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದರ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಅದನ್ನು ಕಟ್ಟುಕಥೆ ಎಂದು ಹೇಳಿದ್ದರು.
ವೀಡಿಯೊ ಹಳೆಯದು ಎಂದು ವರದಿಗಾರರು ಗಮನಸೆಳೆದಾಗ, ರಾವ್ “ಹಳೆಯದು ಎಂದರೆ, ಎಂಟು ವರ್ಷಗಳ ಹಿಂದೆ ನಾನು ಬೆಳಗಾವಿಯಲ್ಲಿದ್ದಾಗ” ಎಂದು ಪ್ರತಿಕ್ರಿಯಿಸಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸರ್ಕಾರದ ಆದೇಶದಲ್ಲೇನಿದೆ?:
ಮುಖ್ಯಮಂತ್ರಿಗಳ ಸೂಚನೆ ಬೆನ್ನಲ್ಲೇ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದೆ. ಅಖಿಲ ಭಾರತ ಸೇವಾ ನಡತೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ, ತನಿಖೆಗೆ ಬಾಕಿ ಇರಿಸಿ ಡಾ.ಕೆ. ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಮೂಲಕ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ, ಆಡಳಿತ ಯಂತ್ರದಲ್ಲಿ ಶಿಸ್ತು ಕಾಪಾಡುವ ಸಂದೇಶ ರವಾನಿಸಿದೆ.























