ಬೆಂಗಳೂರು, ಜ.20 www.bengaluruwire.com : ಸಿಲಿಕಾನ್ ಸಿಟಿಯ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಹಾಗೂ ಅದರ ಅಡಿಯಲ್ಲಿ ಬರುವ ಐದು ನೂತನ ನಗರ ಪಾಲಿಕೆಗಳಿಗೆ ಆರ್ಥಿಕ ಬಲ ತುಂಬಲು 5ನೇ ರಾಜ್ಯ ಹಣಕಾಸು ಆಯೋಗ ಸಜ್ಜಾಗಿದೆ.
ಈ ಸಂಬಂಧ ಐದು ಪಾಲಿಕೆಗಳು ಮತ್ತು 369 ವಾರ್ಡ್‌ಗಳ ಸಮಗ್ರ ಅಧ್ಯಯನ ನಡೆಸಿ, ಸರ್ಕಾರಕ್ಕೆ ಶೀಘ್ರದಲ್ಲೇ ಶಿಫಾರಸು ವರದಿ ಸಲ್ಲಿಸಲಾಗುವುದು ಎಂದು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ನಗರದ ಜಿಬಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಮಹತ್ವದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅತ್ಯಂತ ಕಡಿಮೆ ಅವಧಿಯಲ್ಲಿ ಜಿಬಿಎ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ನೂತನ ಪಾಲಿಕೆಗಳು ಮತ್ತು ಪ್ರಾಧಿಕಾರವು ಒಂದೇ ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಅಗತ್ಯವಿರುವ ಅನುದಾನ ಮತ್ತು ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಕೂಲಂಕಷ ವರದಿ ನೀಡಲಾಗುವುದು ಎಂದರು.
ತೆರಿಗೆ ಹಂಚಿಕೆಯ ಸವಾಲು:

ಸಭೆಯಲ್ಲಿ ಮಾತನಾಡಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬಿಬಿಎಂಪಿ ವಿಭಜನೆಯ ನಂತರದ ಆರ್ಥಿಕ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದರು. “ಮುಖ್ಯವಾಗಿ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 112 ವಾರ್ಡ್‌ಗಳಿದ್ದು, ಇಲ್ಲಿ ವಸತಿ ಪ್ರದೇಶಗಳೇ ಹೆಚ್ಚಾಗಿವೆ. ಇದರಿಂದ ವಾಣಿಜ್ಯ ತೆರಿಗೆ ಸಂಗ್ರಹ ಕಡಿಮೆ ಇರಲಿದ್ದು, ಆದಾಯ ಕೊರತೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ, ಹೆಚ್ಚು ತೆರಿಗೆ ಸಂಗ್ರಹವಾಗುವ ಪಾಲಿಕೆಗಳಿಂದ ಕಡಿಮೆ ಆದಾಯವಿರುವ ಪಾಲಿಕೆಗಳಿಗೆ ಸಂಪನ್ಮೂಲ ವರ್ಗಾವಣೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ,” ಎಂದು ಅವರು ವಿವರಿಸಿದರು.
ಮೂಲಸೌಕರ್ಯಕ್ಕೆ ‘ಪಂಚ’ ಸೂತ್ರ:
ಆಯೋಗದ ಸದಸ್ಯ ಮೊಹಮ್ಮದ್ ಸನಾವುಲ್ಲ ಮಾತನಾಡಿ, ಜಿಬಿಎ ಕೇವಲ ಆಡಳಿತಕ್ಕಷ್ಟೇ ಸೀಮಿತವಾಗದೆ ರಸ್ತೆ, ಕೆರೆ, ಬೀದಿ ದೀಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಎಂಬ ಐದು ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ, ನಗರದಲ್ಲಿ ಗ್ರಂಥಾಲಯಗಳ ಸಂಖ್ಯೆ ಕುಸಿಯುತ್ತಿದ್ದು, ಉದ್ಯಾನವನಗಳು ಮತ್ತು ಸ್ಲಂ ಪ್ರದೇಶಗಳಲ್ಲಿ ಗ್ರಂಥಾಲಯ ಹಾಗೂ ಶೌಚಾಲಯಗಳನ್ನು ನಿರ್ಮಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಸಭೆಯಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರುಗಳಾದ ಆರ್. ಎಸ್. ಫೋಂಡೆ, ಸಲಹೆಗಾರರಾದ ಡಾ. ಛಾಯಾ ದೇಗಾಂವಕರ್, ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ಆರ್. ರಾಮಚಂದ್ರನ್, ಸುರೋಳ್ಕರ್ ವಿಕಾಸ್ ಕಿಶೋರ್, ಬಿಎಸ್ ಡಬ್ಲ್ಯುಎಂಎಲ್ ಸಿಇಒ ಕರೀಗೌಡ, ಬಿಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಬಿ.ಎಸ್.ಪ್ರಹ್ಲಾದ್, ಉಪ ಆಯುಕ್ತರಾದ ಗಾಯತ್ರಿ ನಾಯಕ್, ರವೀಂದ್ರ, ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಒಟ್ಟಿನಲ್ಲಿ, ನೂತನ ಜಿಬಿಎ ವ್ಯವಸ್ಥೆಗೆ ಆರ್ಥಿಕ ಭದ್ರ ಬುನಾದಿ ಹಾಕಲು ಆಯೋಗವು ಸಿದ್ಧತೆ ನಡೆಸಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























