ಬೆಂಗಳೂರು, ಜ.19 www.bengaluruwire.com : ಕರುನಾಡಿನ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಅದ್ದೂರಿಯಾಗಿ ತೆರೆಕಂಡಿದ್ದು, ಪ್ರೇಕ್ಷಕರ ನಿರೀಕ್ಷೆಯಂತೆ ‘ಗಿಲ್ಲಿ’ ಖ್ಯಾತಿಯ ನಟ ವಿಜಯದ ನಗೆ ಬೀರಿದ್ದಾರೆ.
ಜಾಲಿವುಡ್ ಸ್ಟುಡಿಯೋದಲ್ಲಿ ನಡೆದ ವರ್ಣರಂಜಿತ ಫಿನಾಲೆಯಲ್ಲಿ, ಬರೋಬ್ಬರಿ 24 ಸ್ಪರ್ಧಿಗಳನ್ನು ಹಿಂದಿಕ್ಕಿ, ಕೋಟ್ಯಂತರ ಕನ್ನಡಿಗರ ಪ್ರೀತಿಗೆ ಪಾತ್ರರಾಗಿ ಟ್ರೋಫಿ ಎತ್ತಿ ಹಿಡಿದಿದ್ದಾರೆ.
ದಾಖಲೆಯ 40 ಕೋಟಿ ವೋಟ್:
ದೊಡ್ಮನೆಯಲ್ಲಿ ಮೊದಲ ದಿನದಿಂದಲೂ ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ಮನರಂಜನೆ ನೀಡಿದ್ದ ಗಿಲ್ಲಿ ನಟ, ಅಂತಿಮ ಹಂತದಲ್ಲಿ ಅಭೂತಪೂರ್ವ ಜನಬೆಂಬಲ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾದ ಬೃಹತ್ ಫ್ಯಾನ್ ಬೇಸ್, ಮತಗಳ ರೂಪದಲ್ಲಿ ಪರಿವರ್ತನೆಯಾಗಿದ್ದು, ಬರೋಬ್ಬರಿ 40 ಕೋಟಿಗೂ ಅಧಿಕ ವೋಟ್‌ಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಗಿಲ್ಲಿಗೆ ಒಲಿದ ಬಂಪರ್ ಬಹುಮಾನಗಳೇನು?:
ಬಿಗ್ ಬಾಸ್ ವಿನ್ನರ್ ಪಟ್ಟದ ಜೊತೆಗೆ ಗಿಲ್ಲಿ ನಟ ಅವರಿಗೆ ಸಿಕ್ಕಿರುವ ಬಹುಮಾನಗಳ ಪಟ್ಟಿ ಇಲ್ಲಿದೆ:
* ನಗದು ಬಹುಮಾನ: ಬಿಗ್ ಬಾಸ್ ಟ್ರೋಫಿ ಜೊತೆಗೆ ವಾಡಿಕೆಯಂತೆ 50 ಲಕ್ಷ ರೂಪಾಯಿ ಚೆಕ್.
* ಐಷಾರಾಮಿ ಕಾರು: ಈ ಬಾರಿಯ ಪ್ರಾಯೋಜಕರಾದ ಮಾರುತಿ ಸುಜುಕಿ ಕಡೆಯಿಂದ ಸುಮಾರು 20 ಲಕ್ಷ ರೂ. ಮೌಲ್ಯದ ‘ಮಾರುತಿ ಸುಜುಕಿ ವಿಕ್ಟೋರಿಸ್’ (Maruti Suzuki Victoris) ಕಾರು ಉಡುಗೊರೆ. (ಇದು 1490 ಸಿಸಿ ಇಂಜಿನ್ ಹಾಗೂ ಗ್ಲೋಬಲ್ ಎನ್‌ಕ್ಯಾಪ್‌ನಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ).
* ಕಿಚ್ಚನ ಗಿಫ್ಟ್: ನಿರೂಪಕ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.
ರನ್ನರ್ ಅಪ್‌ಗಳ ಕಥೆಯೇನು?:
ತೀವ್ರ ಪೈಪೋಟಿ ನೀಡಿದ ರಕ್ಷಿತಾ ಶೆಟ್ಟಿ (Rakshita Shetty) ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ‘ರಾಜಮಾತೆ’ ಖ್ಯಾತಿಯ ಅಶ್ವಿನಿ ಗೌಡ (Ashwini Gowda) ಟಾಪ್ 3 ಸ್ಥಾನ ಅಲಂಕರಿಸಿ ದೊಡ್ಮನೆಯಿಂದ ಹೊರಬಂದರು. ಟಾಸ್ಕ್ ಮತ್ತು ಗೇಮ್‌ಗಳಲ್ಲಿ ಅಶ್ವಿನಿ ಗೌಡ ತೋರಿದ ಪ್ರದರ್ಶನ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಗೆದ್ದ ಹಣಕ್ಕೆ ಕತ್ತರಿ: ಕೈ ಸೇರೋದು ಎಷ್ಟು?:
50 ಲಕ್ಷ ಗೆದ್ದರು ಎಂದು ಸಂಭ್ರಮಿಸುವ ಮುನ್ನ, ಈ ಹಣಕ್ಕೆ ಬೀಳುವ ತೆರಿಗೆಯ (Tax) ಬಗ್ಗೆ ತಿಳಿಯಲೇಬೇಕು. ಭಾರತೀಯ ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಲಾಟರಿ, ಗೇಮ್ ಶೋ ಅಥವಾ ರಿಯಾಲಿಟಿ ಶೋಗಳಲ್ಲಿ ಗೆಲ್ಲುವ 10,000 ರೂ.ಗಿಂತ ಹೆಚ್ಚಿನ ಹಣಕ್ಕೆ ನೇರವಾಗಿ ಶೇ. 30ರಷ್ಟು ಟಿಡಿಎಸ್ (TDS) ಅನ್ವಯವಾಗುತ್ತದೆ.
* ಒಟ್ಟು ಬಹುಮಾನ: 50,00,000 ರೂ.
* ತೆರಿಗೆ ಕಡಿತ (30%): 15,00,000 ರೂ.
* ವಿಜೇತರ ಕೈ ಸೇರುವ ಮೊತ್ತ: 35,00,000 ರೂ. ಮಾತ್ರ.
ಇದೇ ನಿಯಮ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರಿಗೂ ಅನ್ವಯಿಸಲಿದೆ. ಅವರು ಗೆದ್ದ 25 ಲಕ್ಷ ರೂಪಾಯಿಯಲ್ಲಿ ಶೇ.30ರಷ್ಟು (7.5 ಲಕ್ಷ) ಕಡಿತಗೊಂಡು, 17.5 ಲಕ್ಷ ರೂ. ಮಾತ್ರ ಅವರ ಖಾತೆ ಸೇರಲಿದೆ. ಇನ್ನು ಸುದೀಪ್ ಅವರು ನೀಡಿದ 10 ಲಕ್ಷ ರೂ. ಉಡುಗೊರೆಗೆ ಈ ತೆರಿಗೆ ಅನ್ವಯವಾಗಲಿದೆಯೇ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಒಟ್ಟಿನಲ್ಲಿ, ಗಿಲ್ಲಿ ನಟನ ಗೆಲುವು ಅವರ ಅಭಿಮಾನಿಗಳಲ್ಲಿ ಸಂಭ್ರಮದ ಹೊಳೆ ಹರಿಸಿದ್ದು, ಸಿನಿಮಾ ರಂಗದಲ್ಲಿ ಅವರಿಗೆ ಹೊಸ ಅವಕಾಶಗಳು ಅರಸಿ ಬರುವ ಸಾಧ್ಯತೆ ದಟ್ಟವಾಗಿದೆ.























