ಬೆಂಗಳೂರು, ಜ.18 www.bengaluruwire.com : ಮೈಕ್ರೋ ಬ್ರಿವರಿ (Micro Brewery) ಲೈಸೆನ್ಸ್ ನೀಡಲು ಬರೋಬ್ಬರಿ 75 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 25 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದ ಅಬಕಾರಿ ಉಪ ಆಯುಕ್ತರೊಬ್ಬರು (Excise DC) ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಗರದ ಬ್ಯಾಟರಾಯನಪುರದಲ್ಲಿ ನಡೆದಿದೆ.
ಅಬಕಾರಿ ಡಿಸಿ ಜಗದೀಶ್ ನಾಯಕ್ ಬಂಧಿತ ಅಧಿಕಾರಿ. ಇವರೊಂದಿಗೆ ಅಬಕಾರಿ ಅಧೀಕ್ಷಕ (Superintendent) ತಮ್ಮಣ್ಣ ಮತ್ತು ಮಧ್ಯವರ್ತಿ ಲಕ್ಕಪ್ಪ ಎಂಬುವವರನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಕಚೇರಿಯಲ್ಲಿ ಸಿಎಲ್-7 (CL-7) ಅಥವಾ ಮೈಕ್ರೋ ಬ್ರಿವರಿ ಲೈಸೆನ್ಸ್ ನೀಡುವ ಸಲುವಾಗಿ ಜಗದೀಶ್ ನಾಯಕ್ ಅವರು ಬೃಹತ್ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಒಟ್ಟು 75 ಲಕ್ಷ ರೂ. ನೀಡುವಂತೆ ಅರ್ಜಿದಾರರಿಗೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಅಧಿಕಾರಿಗಳು, ಶನಿವಾರದಂದು ಜಗದೀಶ್ ನಾಯಕ್ ಅವರು ಮೊದಲ ಕಂತಿನ ರೂಪದಲ್ಲಿ 25 ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಿದ್ದಾಗಲೇ ದಾಳಿ ನಡೆಸಿದ್ದಾರೆ. ಹಣದ ಸಮೇತ ಆರೋಪಿಗಳನ್ನು ರೆಡ್ ಹ್ಯಾಂಡ್ (Red-handed) ಆಗಿ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.























