ಬೀದರ್, ಜ.17 www.bengaluruwire.com: ಕಲ್ಯಾಣ ಕರ್ನಾಟಕದ ಪಾಲಿನ ದೊಡ್ಡ ಆಲದ ಮರವೊಂದು ಉರುಳಿದೆ. ಗಡಿ ಜಿಲ್ಲೆ ಬೀದರ್‌ನಲ್ಲಿ ಕನ್ನಡದ ದೀಪ ಹಚ್ಚಿದ, ಶಿಕ್ಷಣದ ಮೂಲಕ ಸಾವಿರಾರು ಬಡವರ ಬಾಳಲ್ಲಿ ಬೆಳಕು ಮೂಡಿಸಿದ ಶತಾಯುಷಿ, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (103) ಅವರ ಶತಮಾನದ ಸಾರ್ಥಕ ಪಯಣ ಶುಕ್ರವಾರ ರಾತ್ರಿ ಅಂತ್ಯಗೊಂಡಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರೂ, ತಮ್ಮ ಇಚ್ಛಾಶಕ್ತಿಯಿಂದಲೇ ಸಾವನ್ನು ಗೆದ್ದಿದ್ದ ಭೀಮಣ್ಣನವರು, ಶುಕ್ರವಾರ ರಾತ್ರಿ ಭಾಲ್ಕಿಯ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಅಪಾರ ಕುಟುಂಬ ವರ್ಗ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.
ಇಂದು ಅಂತಿಮ ದರ್ಶನ- ಸಂಜೆ ಅಂತ್ಯಕ್ರಿಯೆ:
ಶನಿವಾರ ಬೆಳಗ್ಗೆ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರವನ್ನು ಭಾಲ್ಕಿಯ ಗಾಂಧಿ ಗಂಜ್ ನಲ್ಲಿರುವ ಅವರ ಮನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು, ಸಂಜೆ ಭಾಲ್ಕಿಯ ಚಿಕಲ್ ಚಂದ ರಸ್ತೆಯಲ್ಲಿನ ಶಾಂತಿಧಾಮದಲ್ಲಿ ಭೀಮಣ್ಣ ಖಂಡ್ರೆ ಅವರ ಶ್ರೀಮತಿ ಲಿಂಗೈಕ್ಯ ಲಕ್ಷ್ಮೀಬಾಯಿ ಅವರ ಸಮಾಧಿಯ ಪಕ್ಕದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನರವೇರಲಿವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.


ಅಧಿಕಾರಕ್ಕಿಂತ ಶಿಕ್ಷಣವೇ ಮೇಲು:
ಭೀಮಣ್ಣ ಖಂಡ್ರೆ ಕೇವಲ ರಾಜಕಾರಣಿಯಾಗಿರಲಿಲ್ಲ, ಅವರೊಬ್ಬ ದಾರ್ಶನಿಕ. ಭಾಲ್ಕಿಯಂತಹ ಹಿಂದುಳಿದ ಪ್ರದೇಶದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕೆಂಬ ಹಂಬಲ ಅವರದ್ದಾಗಿತ್ತು. ಅದಕ್ಕಾಗಿ ಎಂತಹ ತ್ಯಾಗಕ್ಕೂ ಅವರು ಸಿದ್ಧರಿದ್ದರು. ಒಮ್ಮೆ ಸಚಿವ ಸ್ಥಾನವನ್ನೇ ತ್ಯಾಗ ಮಾಡಿ, ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಅವರ ಈ ನಿರ್ಧಾರದಿಂದಾಗಿ ಇಂದು ಹಳ್ಳಿಗಳ ಸಾವಿರಾರು ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಿದೆ.

ಮಾತಿನ ಮೋಡಿಗಾರ:
ಜನರ ಮೇಲೆ ಭೀಮಣ್ಣನವರಿಗೆ ಇದ್ದ ಪ್ರಭಾವ ಎಂತಹದ್ದೆಂದರೆ, 1976ರಲ್ಲಿ ಕುಟುಂಬ ಯೋಜನೆ ಬಗ್ಗೆ ಜನರಲ್ಲಿ ಭಯವಿದ್ದ ಕಾಲವದು. ಆಗ ಖುದ್ದು ಭೀಮಣ್ಣನವರೇ ರಸ್ತೆಗಿಳಿದು ಜನರ ಮನವೊಲಿಸಿದ್ದರು. ಇವರ ಮಾತಿಗೆ ಬೆಲೆಕೊಟ್ಟು ಒಂದೇ ದಿನ ಬರೋಬ್ಬರಿ 2,500ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು! ಈ ದಾಖಲೆ ಅಂದು ‘ಬಿಬಿಸಿ’ಯಲ್ಲೂ ಸುದ್ದಿಯಾಗಿತ್ತು.
ಯೋಗಿಯೇ ಆಗಿದ್ದ ಏಕೀಕರಣದ ಹೋರಾಟಗಾರ:
ರಾಜಕಾರಣದ ಜಂಜಾಟದಲ್ಲಿದ್ದರೂ ಭೀಮಣ್ಣನವರು ಶಿಸ್ತಿನ ಸಿಪಾಯಿ. ಬಾಲ್ಯದಲ್ಲಿ ಅಸ್ವಸ್ಥರಾಗಿದ್ದಾಗ ಕಲಿತ ಯೋಗವನ್ನು ಅವರು 100 ವರ್ಷ ದಾಟಿದರೂ ಬಿಟ್ಟಿರಲಿಲ್ಲ. ನಿತ್ಯ ಇಷ್ಟಲಿಂಗ ಪೂಜೆ, ಮಿತ ಆಹಾರ, ಸಾತ್ವಿಕ ಬದುಕೇ ಅವರ ಶತಾಯುಷ್ಯದ ಗುಟ್ಟಾಗಿತ್ತು. ಹೈದರಾಬಾದ್ ವಿಮೋಚನಾ ಹೋರಾಟದಿಂದ ಹಿಡಿದು, ಬೀದರ್ ಅನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುವ ಏಕೀಕರಣ ಹೋರಾಟದವರೆಗೆ ಅವರ ಬದುಕು ಹೋರಾಟದ ಕೆಂಡದಂತೆಯೇ ಇತ್ತು.
ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣಕ್ಕೆ ತಲೆ ಮೇಲೆ ಕಾಂಕ್ರೀಟ್ ಬುಟ್ಟಿ ಹೊತ್ತು ದುಡಿದಿದ್ದ ಈ ‘ಕಾಯಕ ಯೋಗಿ’, ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ಕಟ್ಟಿದ ಸಹಕಾರಿ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಅಮರರಾಗಿದ್ದಾರೆ.























