ಬೆಂಗಳೂರು, ಜ.14 www.bengaluruwire.com : ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ (EV) ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಐತಿಹಾಸಿಕ ಹೆಜ್ಜೆಯಿಟ್ಟಿದೆ.
ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಅನುಕೂಲವಾಗುವಂತೆ ದೇಶದಲ್ಲೇ ಮೊದಲ ಬಾರಿಗೆ ‘ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್’ (Land Aggregator Portal) ಅನ್ನು ಬಿಡುಗಡೆ ಮಾಡಿದೆ.
ನಗರದ ಬೆಸ್ಕಾಂ ನಿಗಮ ಕಚೇರಿಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಈ ವಿನೂತನ ಪೋರ್ಟಲ್‌ಗೆ ಚಾಲನೆ ನೀಡಿದರು. ಈ ಡಿಜಿಟಲ್ ವೇದಿಕೆಯು ರಾಜ್ಯಾದ್ಯಂತ ಹಸಿರು ಚಲನಶೀಲತೆ (Green Mobility) ಉಪಕ್ರಮಗಳಿಗೆ ವೇಗ ನೀಡಲಿದ್ದು, ವಿದ್ಯುತ್ ಸಂಪರ್ಕ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
ಏನಿದು ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್?:

ಇವಿ ಮೂಲಸೌಕರ್ಯ ಅಭಿವೃದ್ಧಿಗೆ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವವನ್ನು ಹೆಚ್ಚಿಸುವುದು ಈ ಪೋರ್ಟಲ್‌ನ ಮುಖ್ಯ ಉದ್ದೇಶ. ಇದರ ಮೂಲಕ ಖಾಸಗಿ ಭೂಮಾಲೀಕರು, ಸರ್ಕಾರಿ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳು ತಮ್ಮ ಜಮೀನನ್ನು ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡಬಹುದು. ಆದಾಯ ಹಂಚಿಕೆ (Revenue Sharing) ಮಾದರಿಯಲ್ಲಿ ಇದು ಕಾರ್ಯನಿರ್ವಹಿಸುವುದರಿಂದ ಜಮೀನು ಮಾಲೀಕರಿಗೆ ಆರ್ಥಿಕ ಲಾಭವೂ ದೊರೆಯಲಿದೆ.
ತ್ವರಿತ ವಿದ್ಯುತ್ ಸಂಪರ್ಕ:
ಈ ಪೋರ್ಟಲ್ ಮೂಲಕ ಜಮೀನು ಮಾಲೀಕರು ಮತ್ತು ಚಾರ್ಜ್ ಪಾಯಿಂಟ್ ಆಪರೇಟರ್‌ಗಳು (CPO) ಸುಲಭವಾಗಿ ಸಂಪರ್ಕ ಸಾಧಿಸಬಹುದು. ಒಮ್ಮೆ ಸ್ಥಳ ನಿಗದಿಯಾಗಿ ಕಾರ್ಯಸಾಧನಾ ವರದಿ ಸಿಕ್ಕ ನಂತರ, ಆಪರೇಟರ್‌ಗಳು ಇದೇ ಪೋರ್ಟಲ್‌ನ ಡ್ಯಾಶ್‌ಬೋರ್ಡ್ ಮೂಲಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು. ಇದರಿಂದ ಅನಗತ್ಯ ವಿಳಂಬ ತಪ್ಪಲಿದ್ದು, ತ್ವರಿತವಾಗಿ ವಿದ್ಯುತ್ ಸಂಪರ್ಕ ದೊರೆಯಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇಂಧನ ಸಚಿವರ ಮಾತು:
ಪೋರ್ಟಲ್ ಬಿಡುಗಡೆಗೊಳಿಸಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್, ಭೂಮಾಲೀಕರು ಮತ್ತು ಚಾರ್ಜಿಂಗ್ ಸ್ಟೇಷನ್ ಆಪರೇಟರ್‌ಗಳನ್ನು ಒಂದೇ ವೇದಿಕೆಗೆ ತರುತ್ತದೆ. ಇದು ರಾಜ್ಯದಲ್ಲಿ ಇವಿ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಕಡಿಮೆ ಕಾರ್ಬನ್ ಆರ್ಥಿಕತೆಯನ್ನು ಸಾಧಿಸಲು ಸಹಕಾರಿಯಾಗಲಿದೆ,” ಎಂದು ಹೇಳಿದರು.
ಈ ಉಪಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಇವಿ ವಿಭಾಗ (NHEV) ಕೂಡ ಕೈಜೋಡಿಸಿದ್ದು, ಹೆದ್ದಾರಿಗಳಲ್ಲೂ ಇವಿ ಹಬ್‌ಗಳ ನಿರ್ಮಾಣಕ್ಕೆ ಉತ್ತೇಜನ ದೊರೆಯಲಿದೆ. ಒಟ್ಟಾರೆಯಾಗಿ ಈ ಯೋಜನೆಯು ರಾಜ್ಯದಲ್ಲಿ ಸ್ವಚ್ಛ ಇಂಧನ ಬಳಕೆ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಹೊಸ ಭಾಷ್ಯ ಬರೆಯಲಿದೆ.























