ಬೆಂಗಳೂರು, ಜ.12 www.bengaluruwire.com : ಐಟಿ ಸಿಟಿ ಬೆಂಗಳೂರಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಪೇಯಿಂಗ್ ಗೆಸ್ಟ್ (PG) ವಸತಿ ಗೃಹಗಳಲ್ಲಿನ ಅವ್ಯವಸ್ಥೆ ಮತ್ತು ಅಶುಚಿತ್ವದ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಚಾಟಿ ಬೀಸಿದೆ. ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿದ್ದ 10 ಪಿಜಿಗಳಿಗೆ ಅಧಿಕಾರಿಗಳು ಸೋಮವಾರ ಬೀಗ ಜಡಿದಿದ್ದಾರೆ.
ನಗರದ ಪ್ರತಿಷ್ಠಿತ ಬಡಾವಣೆಗಳಾದ ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಕ್ಷಿಣ ನಗರ ಪಾಲಿಕೆಯ ಆಯುಕ್ತರ ಆದೇಶದನ್ವಯ, ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಅವರ ನೇತೃತ್ವದಲ್ಲಿ ಒಟ್ಟು 66 ಪೇಯಿಂಗ್ ಗೆಸ್ಟ್ ವಸತಿ ಗೃಹಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು.
ಪರಿಶೀಲನೆ ವೇಳೆ ಕಂಡಿದ್ದೇನು?:
ಪಿಜಿಗಳಲ್ಲಿ ವಾಸಿಸುವವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ಅಡುಗೆ ಕೋಣೆಯ ನೈರ್ಮಲ್ಯ, ಅಗ್ನಿಶಾಮಕ ಸುರಕ್ಷತಾ ಉಪಕರಣಗಳು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ಎಫ್‌ಎಸ್‌ಎಸ್‌ಎಐ (FSSAI) ಆಹಾರ ಸುರಕ್ಷತಾ ಪ್ರಮಾಣ ಪತ್ರವಿದೆಯೇ ಎಂದು ಪರಿಶೀಲಿಸಲಾಯಿತು.

10 ಪಿಜಿಗಳು ಸೀಲ್, ದಂಡ ವಸೂಲಿ:
ತಪಾಸಣೆಯ ವೇಳೆ ಅಡುಗೆ ಕೋಣೆಗಳಲ್ಲಿ ಅತೀವ ಅಶುಚಿತ್ವ ಕಂಡುಬಂದ ಮತ್ತು ಕನಿಷ್ಠ ನೈರ್ಮಲ್ಯ ಕಾಪಾಡದ 10 ಪಿಜಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಬೀಗಮುದ್ರೆ ಹಾಕಿದ್ದಾರೆ. ಅಲ್ಲದೆ, ಸಣ್ಣಪುಟ್ಟ ಲೋಪಗಳು ಕಂಡುಬಂದ ಪಿಜಿ ಮಾಲೀಕರಿಗೆ ಒಟ್ಟು 22,500 ರೂ.ಗಳ ದಂಡ ವಿಧಿಸಲಾಗಿದೆ.
ಉಳಿದಂತೆ ಹಲವು ಪಿಜಿ ಮಾಲೀಕರಿಗೆ ಎಚ್ಚರಿಕೆ ಅಥವಾ ತಿಳುವಳಿಕೆ ಪತ್ರಗಳನ್ನು (Notice) ನೀಡಲಾಗಿದ್ದು, ಮುಂದಿನ 7 ದಿನಗಳ ಒಳಗಾಗಿ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ವರದಿ ನೀಡುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ಪಿಜಿಗಳ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಕ್ಷಿಣ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಎಚ್ಚರಿಕೆ ನೀಡಿದ್ದಾರೆ.























