ಉಡುಪಿ/ಸಾಲಿಗ್ರಾಮ, ಜ.09 www.bengaluruwire.com : ಕೋಟ-ಸಾಲಿಗ್ರಾಮ ಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವದ ಪ್ರಯುಕ್ತ, ಶುಕ್ರವಾರ (ಜ.09) ಬೆಳಿಗ್ಗೆ 9 ಗಂಟೆಗೆ ರಥಾರಂಭ ಪ್ರಕ್ರಿಯೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಜನಾರ್ಧನ ಅಡಿಗ ಅವರು ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ರಥಕ್ಕೆ ಪೂಜೆ ನೆರವೇರಿಸಿದರು. ಬಳಿಕ ರಥವನ್ನು ಕೊಠಡಿಯಿಂದ ಹೊರತೆಗೆದು ರಥ ನಿರ್ಮಾಣ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತ, ಕಾರ್ಯದರ್ಶಿಗಳಾದ ಲಕ್ಷ್ಮೀನಾರಾಯಣ ತುಂಗ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


ಧಾರ್ಮಿಕ ಕಾರ್ಯಕ್ರಮಗಳ ವಿವರ:
ಶ್ರೀ ಕ್ಷೇತ್ರದಲ್ಲಿ ಜನವರಿ 5 ರಿಂದ 12 ರವರೆಗೆ ಶಾಕಲ ಋಕ್‌ಸಂಹಿತಾ ಯಾಗ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ನಡೆಯಲಿರುವ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ:

* ಜ. 13 (ಮಂಗಳವಾರ): ಸಂಜೆ 7.30ಕ್ಕೆ ಮುಹೂರ್ತ ಬಲಿ ಮತ್ತು ಅಂಕುರಾರೋಪಣ.
* ಜ. 14 (ಬುಧವಾರ): ಮಕರ ಸಂಕ್ರಮಣ ಪುಣ್ಯಕಾಲದಂದು ಸಂಜೆ 7.30ಕ್ಕೆ ಧ್ವಜಾರೋಹಣ ನೆರವೇರಲಿದೆ.
* ಜ. 15 (ಗುರುವಾರ): ಸಂಜೆ 5.30ರಿಂದ ಸುತ್ತುಸೇವೆ, ಪಲ್ಲಕ್ಕಿ ಉತ್ಸವ ಮತ್ತು ಪುರಮೆರವಣಿಗೆ ನಡೆಯಲಿದೆ.
* ಜ. 16 (ಶುಕ್ರವಾರ): ಉತ್ಸವದ ಪ್ರಮುಖ ದಿನವಾಗಿದ್ದು, ಪೂರ್ವಾಹ್ನ 11.00ಕ್ಕೆ ವಿಜೃಂಭಣೆಯ ವಾರ್ಷಿಕ ಬ್ರಹ್ಮರಥೋತ್ಸವ ಜರುಗಲಿದೆ.
* ಜ. 17 (ಶನಿವಾರ): ಬೆಳಿಗ್ಗೆ 8.00ಕ್ಕೆ ಪ್ರಭೋದೋತ್ಸವ, ಸಂಜೆ 5.30ಕ್ಕೆ ಓಕುಳಿ ಸೇವೆ, ರಜತ ರಥೋತ್ಸವ ಹಾಗೂ ಅವಭೃತ ಸ್ನಾನ ನಡೆಯಲಿದೆ. ಜ.18 ರಂದು ಸಂಪ್ರೋಕ್ಷಣೆ ಮತ್ತು ಗಣಹೋಮದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
‘ಸಾಲಿಗ್ರಾಮ ಹಬ್ಬ’ – ಸಾಂಸ್ಕೃತಿಕ ವೈಭವ:
ಬ್ರಹ್ಮರಥೋತ್ಸವದ ಅಂಗವಾಗಿ ಶ್ರೀ ಗುರುನರಸಿಂಹ ಬಯಲು ರಂಗ ಮಂದಿರದಲ್ಲಿ ಇದೇ ಜ.13 ರಿಂದ 19ರ ವರೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
* ಜ. 13ರಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ವಿದ್ವಾನ್ ಡಾ. ಪ್ರಿಯಾ ಗಣೇಶ್ ಶಿಷ್ಯವೃಂದದಿಂದ “ಕೃಷ್ಣಾಮೃತ” ನಡೆಯಲಿದೆ.
* ಜ. 14ರಂದು “ಮಧುರ ಗೀತೆಗಳ ಸುಮಧುರ ಯಾನ”, ಜ. 15ರಂದು ಭರತನಾಟ್ಯ ಹಾಗೂ ಶ್ರೀ ಅಮೃತೇಶ್ವರಿ ಮಂಡಳಿಯಿಂದ “ಕಾಲಮಿತಿ ಯಕ್ಷಗಾನ” ಪ್ರದರ್ಶನಗೊಳ್ಳಲಿದೆ.
* ಜ. 16ರಂದು ಯುವವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ ಇವರಿಂದ ವೈವಿಧ್ಯಮಯ ಕಾರ್ಯಕ್ರಮ ಮತ್ತು ಜ. 17ರಂದು ಶನಿವಾರ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ “ಯಕ್ಷಗಾನ ಬಯಲಾಟ” ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿ ಕೋರಿದೆ.






















