ಬೆಂಗಳೂರು, ಜ.09 www.bengaluruwire.com : ನಂಬಿಕೆ ಕಳೆದುಕೊಂಡಾಗ ನಮಗೆ ದೇವರ ನೆನಪಾಗುತ್ತದೆ. ದೇವರು ನಮ್ಮ ಜೀವನದಲ್ಲಿ ಆಟವಾಡುತ್ತಿದ್ದಾನೆ ಎನಿಸಿದಾಗ, ನಾವೆಲ್ಲರೂ ‘ದೇವನೊಬ್ಬ ಜಾದೂಗಾರ’ ಎಂದು ಉದ್ಗರಿಸುತ್ತೇವೆ.
ಇದೇ ಶೀರ್ಷಿಕೆಯಡಿ ಹೊಸದೊಂದು ವಿಭಿನ್ನ ಕಥಾಹಂದರವುಳ್ಳ ಸಿನಿಮಾ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ. ಖಟ್ವಾಂಗ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ವರುಣ್ ಎಸ್. ವಸಿಷ್ಠ ನಿರ್ದೇಶನದ ‘ದೇವನೊಬ್ಬ ಜಾದೂಗಾರ’ ಚಿತ್ರದ ಟೀಸರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿತು.

ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿರುವ ಹಾಗೂ ಅನಿವಾಸಿ ಭಾರತೀಯರ (NRI) ಕನ್ನಡ ಸಂಘದ ಸ್ಥಾಪಕರಾದ ಬಾಲಕೃಷ್ಣ ಶೆಟ್ಟಿ (ಬಿ.ಕೆ. ಶೆಟ್ಟಿ) ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮ ಮಗ ಸಚಿನ್ ಶೆಟ್ಟಿ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿತು.
ಏನಿದರ ಚಿತ್ರಕಥೆ?:

ಕಾಶಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಘಟನೆಗಳ ಸುತ್ತ ಈ ಸಿನಿಮಾ ಹೆಣೆಯಲಾಗಿದೆ. ಇದೊಂದು ‘ಕ್ರೈಂ ಥ್ರಿಲ್ಲರ್’ ಜಾನರ್ ಸಿನಿಮಾವಾಗಿದ್ದು, ‘ದೇವ’ ಎನ್ನುವ ಲಾರಿ ಚಾಲಕನ ಪಾತ್ರವೇ ಕಥೆಯ ಜೀವಾಳ. ಆತನ ಜೀವನದಲ್ಲಿ ನಡೆಯುವ ಕಲ್ಪನಾತೀತ ಘಟನೆಗಳು, ಆ ಊರಿನ ಇಬ್ಬರು ಪ್ರಮುಖ ವ್ಯಕ್ತಿಗಳು ದೇವನ ಮೇಲೆ ಬೀರುವ ಪ್ರಭಾವ ಮತ್ತು ಅಂತಿಮವಾಗಿ ದೇವನ ಬದುಕು ಬದಲಾಗುವ ಪರಿ ಕುತೂಹಲಕಾರಿಯಾಗಿದೆ ಎಂದು ನಿರ್ದೇಶಕ ವರುಣ್ ಎಸ್. ವಸಿಷ್ಠ ತಿಳಿಸಿದರು. ವಿಶೇಷವೆಂದರೆ ಚಿತ್ರದಲ್ಲಿ ಮಂಗಳಮುಖಿ ಪಾತ್ರವೊಂದು ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ.
ನಿರ್ಮಾಪಕರ ಮಾತು:
ನಿರ್ಮಾಪಕ ಬಾಲಕೃಷ್ಣ ಶೆಟ್ಟಿ ಮಾತನಾಡಿ, “ನಾನು ವಿದೇಶದಲ್ಲಿದ್ದರೂ ಕನ್ನಡದ ಮೇಲಿನ ಅಭಿಮಾನದಿಂದ ಅಲ್ಲಿ ಕನ್ನಡ ಸಂಘವನ್ನು ಕಟ್ಟಿದ್ದೆ. ನನ್ನ ಮಗ ಸಚಿನ್ ಗೆ ಬಾಲ್ಯದಿಂದಲೂ ನಟನಾಗುವ ಆಸೆ ಇತ್ತು. ನಾಲ್ಕು ವರ್ಷಗಳ ಹಿಂದೆ ವರುಣ್ ಬಂದು ಕಥೆ ಹೇಳಿದಾಗ, ನನ್ನ ಮಗನನ್ನೇ ನಾಯಕನನ್ನಾಗಿ ಕಲ್ಪಿಸಿಕೊಂಡು ಒಪ್ಪಿಗೆ ನೀಡಿದೆ. ತಂಡದ ಶ್ರಮ ಟೀಸರ್ ನಲ್ಲಿ ಕಾಣುತ್ತಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ನಾಯಕ ನಟ ಸಚಿನ್ ಶೆಟ್ಟಿ ಮಾತನಾಡಿ, ಫೇಸ್ ಬುಕ್ ಮೂಲಕ ನಿರ್ದೇಶಕ ವರುಣ್ ಪರಿಚಯವಾಯಿತು. ನನ್ನ ‘ರಾ ಲುಕ್’ (Raw Look) ನೋಡಿ ಈ ಕಥೆಗೆ ಆಯ್ಕೆ ಮಾಡಿಕೊಂಡರು ಎಂದು ಸ್ಮರಿಸಿದರು. ಚಿತ್ರದಲ್ಲಿ ಹಿರಿಯ ನಟಿ ಸುಧಾ ಬೆಳವಾಡಿ ಅವರು ಮುಖ್ಯಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, “ಟೈಟಲ್ ನೋಡಿಯೇ ಜನ ಸಿನಿಮಾ ನೋಡಲು ಬರುತ್ತಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಯಕಿ ಪ್ರಿಯಾ ಜೆ. ಆಚಾರ್, ಮ್ಯಾಕ್ಸ್ ಮಂಜು ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ದೀಪಕ್ ನಾಯಕ್ ಸಂಗೀತ, ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ ಹಾಗೂ ಶ್ಯಾಮ್ ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.






















