ಬೆಂಗಳೂರು, ಜ.08 www.bengaluruwure.com : ಕೆಜಿಎಫ್ ಸರಣಿಯ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ‘ರಾಕಿಂಗ್ ಸ್ಟಾರ್’ ಯಶ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಇಂದು (ಜ.08) ಇಡೀ ಸ್ಯಾಂಡಲ್ ವುಡ್ ಸಾಕ್ಷಿಯಾಗಿದೆ. ಈ ವಿಶೇಷ ದಿನದಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಂತಾಗಿದೆ.
‘ಟಾಕ್ಸಿಕ್’ ಅಂಗಳದಲ್ಲಿ ತಾರೆಯರ ದಂಡು:
ಕಳೆದ ವರ್ಷ ಯಶ್ ಹುಟ್ಟುಹಬ್ಬದಂದು ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡುವ ಮೂಲಕ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಯಶ್ ಮಿಂಚಿದ್ದರು. ಇದೀಗ ಬಿಡುಗಡೆಯಾಗಿರುವ ಅಧಿಕೃತ ಟೀಸರ್‌ನಲ್ಲಿ ಯಶ್ ಅವರ ಪಾತ್ರವನ್ನು ಮತ್ತಷ್ಟು ರಿವೀಲ್ ಮಾಡಲಾಗಿದ್ದು, ಅವರ ಖಡಕ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೇವಲ ಯಶ್ ಮಾತ್ರವಲ್ಲದೆ, ಈ ಸಿನಿಮಾದಲ್ಲಿ ತಾರೆಯರ ದಂಡೇ ಇದೆ. ಸ್ಯಾಂಡಲ್ ವುಡ್ ನ ರುಕ್ಮಿಣಿ ವಸಂತ್, ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಊಹಿಸಲಾಗದ ಟ್ವಿಸ್ಟ್ ಗಳಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸುವ ಮುನ್ಸೂಚನೆ ನೀಡಿದೆ.
ಟೀಸರ್ ಬಿಡುಗಡೆಯಾದ ಕೇವಲ ಎರಡು ಗಂಟೆಗಳಲ್ಲಿ 20.37 ಲಕ್ಷ ಜನರು ವೀಕ್ಷಿಸಿದ್ದು, 3.27 ಲಕ್ಷ ಜನರು ಲೈಕ್ ಮಾಡಿದ್ದಾರೆ.


ಹಾಸನದಿಂದ ಹಾಲಿವುಡ್‌ವರೆಗೆ: ಯಶ್ ನಡೆದು ಬಂದ ಹಾದಿ:
ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್ ಅವರ ಮೂಲ ಹೆಸರು ನವೀನ್ ಕುಮಾರ್ ಗೌಡ. ಹಾಸನ ಜಿಲ್ಲೆಯಲ್ಲಿ 1986ರ ಜನವರಿ 8ರಂದು ಜನಿಸಿದ ಅವರು, ಬಣ್ಣದ ಲೋಕದ ಕನಸು ಹೊತ್ತು ಬೆಂಗಳೂರಿಗೆ ಬಂದವರು. ಆರಂಭದಲ್ಲಿ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 2007ರಲ್ಲಿ ‘ಜಂಭದ ಹುಡುಗಿ’ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟ ಯಶ್, ನಂತರ ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ನಾಯಕ ನಟನಾಗಿ ಹೊರಹೊಮ್ಮಿದರು. ಕಿರಾತಕ, ಗೂಗ್ಲಿ, ರಾಜಾಹುಲಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮಾಸ್ಟರ್ ಪೀಸ್ ನಂತಹ ಹಿಟ್ ಚಿತ್ರಗಳನ್ನು ನೀಡಿದರು. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ (KGF) ಸರಣಿಯು ಅವರನ್ನು ಜಾಗತಿಕ ಮಟ್ಟದ ತಾರೆಯನ್ನಾಗಿ ಮಾಡಿತು.
ನವೀನ್ ಕುಮಾರ್ ‘ಯಶ್’ ಆಗಿದ್ದು ಹೇಗೆ?:
ಯಶ್ ಅವರ ಹೆಸರಿನ ಹಿಂದೆಯೂ ಒಂದು ಕುತೂಹಲಕಾರಿ ಕಥೆಯಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೀನ್ ಕುಮಾರ್ ಅವರಿಗೆ ‘ಯ’ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಇಡಲು ಸೂಚಿಸಲಾಗಿತ್ತಂತೆ. ಹೀಗಾಗಿ ಪೋಷಕರು ಅವರಿಗೆ ‘ಯಶ್ವಂತ್’ ಎಂದು ನಾಮಕರಣ ಮಾಡಿದ್ದರು. ಆದರೆ ಸಿನಿಮಾ ರಂಗಕ್ಕೆ ಕಾಲಿಡುವಾಗ, ಉದ್ಯಮದ ಹಿರಿಯರ ಸಲಹೆಯಂತೆ ಸುಲಭವಾಗಿ ಜನರಿಗೆ ತಲುಪಲಿ ಎಂಬ ಕಾರಣಕ್ಕೆ ‘ಯಶ್’ ಎಂಬ ಹೆಸರಿನೊಂದಿಗೆ ಪರಿಚಯವಾದರು. ಇಂದು ಅದೇ ಹೆಸರು ಬ್ರ್ಯಾಂಡ್ ಆಗಿ ಬದಲಾಗಿರುವುದು ಇತಿಹಾಸ.






















