ಮೈಸೂರು, ಜ.05 www.bengaluruwire.com : ರಾಜ್ಯದ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ದೀರ್ಘಾವಧಿಯ ಆಡಳಿತದ ದಾಖಲೆಯನ್ನು ಅಳಿಸಿ ಹಾಕುವ ಹೊಸ್ತಿಲಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜಕೀಯದಲ್ಲಿ ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ,” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ (ಜ.05) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಾವು ರಾಜ್ಯದ ಅತಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ನಾಳೆ (ಜ.06) ದಾಖಲೆ ಸರಿಗಟ್ಟುತ್ತಿರುವ ಐತಿಹಾಸಿಕ ಕ್ಷಣದ ಬಗ್ಗೆ ಸಂತಸ ವ್ಯಕ್ತಪಡಿಸಿದರು. “ಇದು ನನ್ನ ಸಾಧನೆಯಲ್ಲ, ರಾಜ್ಯದ ಜನತೆ ತೋರಿದ ಪ್ರೀತಿ ಮತ್ತು ಆಶೀರ್ವಾದದ ಫಲ. ದೇವರಾಜ ಅರಸು ಅವರು ಮೈಸೂರಿನವರೇ ಆಗಿರುವುದು ಮತ್ತು ನಾನೂ ಅದೇ ಜಿಲ್ಲೆಯವನಾಗಿ ಈ ಮೈಲಿಗಲ್ಲು ತಲುಪುತ್ತಿರುವುದು ಸಂತಸ ತಂದಿದೆ,” ಎಂದರು.
ತಮ್ಮ ರಾಜಕೀಯ ಹಾದಿಯನ್ನು ಮೆಲುಕು ಹಾಕಿದ ಸಿಎಂ, “ತಾಲ್ಲೂಕು ಬೋರ್ಡ್ ಸದಸ್ಯನಾಗಿದ್ದ ನಾನು, 13 ಚುನಾವಣೆಗಳನ್ನು ಎದುರಿಸಿ 8 ಬಾರಿ ಗೆದ್ದಿದ್ದೇನೆ. ಸಚಿವನಾಗುವ, ಸಿಎಂ ಆಗುವ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಮುಂದೊಂದು ದಿನ ನನ್ನ ದಾಖಲೆಯನ್ನು ಮುರಿಯುವ, ನನಗಿಂತ ಹೆಚ್ಚು ಬಜೆಟ್ ಮಂಡಿಸುವ ನಾಯಕರು ಬರಬಹುದು,” ಎಂದು ಅಭಿಪ್ರಾಯಪಟ್ಟರು.
ಕೇಂದ್ರದ ವಿರುದ್ಧ ವಾಗ್ದಾಳಿ:

ಕೇಂದ್ರ ಸರ್ಕಾರದ ತಾರತಮ್ಯ ನೀತಿಯ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ವಾರ್ಷಿಕ 12 ರಿಂದ 15 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ ಎಂದು ದೂರಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಸ್ವರೂಪ ಬದಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಕೇಂದ್ರವೇ ಸಂಪೂರ್ಣ ಅನುದಾನ ನೀಡುತ್ತಿತ್ತು. ಈಗ ಕೇಂದ್ರ-ರಾಜ್ಯ 60:40 ಅನುಪಾತ ಜಾರಿಗೊಳಿಸಿರುವುದು ಅಸಂವಿಧಾನಿಕ. ಇದರಿಂದ ರಾಜ್ಯ ಬಜೆಟ್ ಮೇಲೆ 3,000 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ ಹಾಗೂ ಬಡವರ ಹಕ್ಕುಗಳನ್ನು ಕಸಿದಂತಾಗಿದೆ,” ಎಂದು ಕಿಡಿಕಾರಿದರು.
ಸಂಪುಟ ಪುನರ್ ರಚನೆ ಮತ್ತು ಇತರೆ ವಿಚಾರಗಳು:
ಸಂಪುಟ ಪುನರ್ ರಚನೆ ಕುರಿತು ಕೇಳಲಾದ ಪ್ರಶ್ನೆಗೆ, “ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರ ಭೇಟಿಗೆ ಸಮಯ ಕೋರಲಾಗಿದ್ದು, ಅವರೊಂದಿಗೆ ಚರ್ಚಿಸಿದ ನಂತರವಷ್ಟೇ ತೀರ್ಮಾನ,” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮೈಸೂರು ವಿಮಾನ ನಿಲ್ದಾಣದ ಬಳಿ ಹುಲಿ ಪ್ರತ್ಯಕ್ಷವಾಗಿರುವ ಬಗ್ಗೆ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸೆರೆಹಿಡಿದು ಕಾಡಿಗೆ ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮೈಸೂರು ಅರಮನೆ ಮುಂಭಾಗದ ಬಲೂನ್ ಸ್ಫೋಟದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















