ಬೆಂಗಳೂರು, ಜ.3 www.bengaluruwire.com : “ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (MGNREGA) ರದ್ದುಪಡಿಸುವ ಮೂಲಕ ಹಳ್ಳಿಗಳ ಅಧಿಕಾರವನ್ನು ಕಸಿದುಕೊಂಡಿದೆ.
ಇದು ಗ್ರಾಮೀಣ ಆರ್ಥಿಕತೆಯನ್ನು ಬುಡಮೇಲು ಮಾಡುವ ಮತ್ತು ಬಡವರ ಹೊಟ್ಟೆಗೆ ಹೊಡೆಯುವ ಹುನ್ನಾರವಾಗಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಅವಧಿಯ ಕ್ರಾಂತಿಕಾರಿ ನರೇಗಾ ಯೋಜನೆಯನ್ನು ಹಿಂಪಡೆದು, ರಾಜ್ಯಗಳ ಅಭಿಪ್ರಾಯವನ್ನೂ ಕೇಳದೆ ಏಕಾಏಕಿ ‘ವಿ.ಬಿ.ಜೆ ರಾಮ್ ಜಿ’ ಹೆಸರಿನ ಹೊಸ ಕಾಯ್ದೆಯನ್ನು ಜಾರಿಗೊಳಿಸಿರುವುದು ಕೇಂದ್ರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ ಎಂದು ಹರಿಹಾಯ್ದರು.
ಗಾಂಧೀಜಿಯನ್ನು ಮತ್ತೆ ಕೊಂದರು:

“ನಾಥೂರಾಂ ಗೋಡ್ಸೆ ಮಹಾತ್ಮಾ ಗಾಂಧೀಜಿಯವರನ್ನು ಒಮ್ಮೆ ಕೊಂದರೆ, ಬಿಜೆಪಿಗರು ನರೇಗಾ ಯೋಜನೆಯಿಂದ ಗಾಂಧಿ ಹೆಸರನ್ನು ತೆಗೆದುಹಾಕುವ ಮೂಲಕ ಅವರನ್ನು ಮತ್ತೆ ಮತ್ತೆ ಕೊಲ್ಲುತ್ತಿದ್ದಾರೆ. ಮನುಸ್ಮೃತಿಯ ಪ್ರಕಾರ ದಲಿತರು, ಮಹಿಳೆಯರು ಮತ್ತು ಶೂದ್ರರ ಕೈಯಲ್ಲಿ ಹಣ ಇರಬಾರದು, ಅವರು ಕೇವಲ ಸೇವಕರಾಗಿರಬೇಕು ಎಂಬುದು ಆರ್‌ಎಸ್‌ಎಸ್ ಸಿದ್ಧಾಂತ. ಇದೇ ಪ್ರೇರಣೆಯಿಂದ ಬಿಜೆಪಿ ಸರ್ಕಾರ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ,” ಎಂದು ಸಿಎಂ ಗಂಭೀರ ಆರೋಪ ಮಾಡಿದರು.
ರಾಜ್ಯದ ಮೇಲೆ ಆರ್ಥಿಕ ಹೊರೆ:
ಹೊಸ ಕಾಯ್ದೆಯ ಅಡಿಯಲ್ಲಿ ಕೇಂದ್ರವು ಶೇ.100ರಷ್ಟು ಅನುದಾನ ನೀಡುವ ಬದಲು, ಶೇ.60 ರಷ್ಟು ಮಾತ್ರ ನೀಡಲಿದ್ದು, ಉಳಿದ ಶೇ.40 ರಷ್ಟು ಹೊರೆಯನ್ನು ರಾಜ್ಯಗಳ ಮೇಲೆ ಹೊರಿಸಲಾಗಿದೆ. ಇದು ಸಂವಿಧಾನದ ಪರಿಚ್ಛೇದ 258 ಮತ್ತು 280ರ ಸ್ಪಷ್ಟ ಉಲ್ಲಂಘನೆ. ಒಕ್ಕೂಟ ವ್ಯವಸ್ಥೆಗೆ ಇದು ಮಾರಕ ಎಂದು ಸಿದ್ದರಾಮಯ್ಯ ವಿವರಿಸಿದರು.
ಹೊಸ ಕಾಯ್ದೆಯ ಗಂಡಾಂತರಗಳೇನು?:
ಹಳೆಯ ಕಾಯ್ದೆಯಂತೆ ಕೂಲಿ ಕಾರ್ಮಿಕರು ತಮ್ಮ ಹಳ್ಳಿಯಲ್ಲೇ, ತಮ್ಮ ಜಮೀನಿನಲ್ಲೇ ಕೆಲಸ ಮಾಡುವ ಹಕ್ಕಿತ್ತು. ಆದರೆ ಹೊಸ ಕಾಯ್ದೆಯ ಸೆಕ್ಷನ್ 5(1) ರ ಪ್ರಕಾರ ಸರ್ಕಾರ ಸೂಚಿಸಿದ ಪ್ರದೇಶದಲ್ಲಿ ಮಾತ್ರ ಕೆಲಸ ಮಾಡಬೇಕು. ಇದರಿಂದ ಸ್ಥಳೀಯವಾಗಿ ಆಸ್ತಿ ಸೃಜನೆಯಾಗುವುದಿಲ್ಲ. ಕೃಷಿ ಅವಧಿಯ 60 ದಿನಗಳಲ್ಲಿ ಯಾವುದೇ ಉದ್ಯೋಗ ನೀಡಲಾಗುವುದಿಲ್ಲ. ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹೆಚ್ಚಿಸುವ ಅವಕಾಶವನ್ನೂ ರದ್ದುಪಡಿಸಲಾಗಿದೆ ಎಂದು ಸಿಎಂ ಅಂಕಿ-ಅಂಶಗಳ ಸಮೇತ ವಿವರಿಸಿದರು.
ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದು, ಇದರಲ್ಲಿ ಶೇ.51.6 ರಷ್ಟು ಮಹಿಳೆಯರೇ ಇದ್ದಾರೆ. ಹೊಸ ಕಾಯ್ದೆಯಿಂದ ಇವರೆಲ್ಲರ ಬದುಕು ದುಸ್ತರವಾಗಲಿದೆ. ತಕ್ಷಣವೇ ಹೊಸ ಕಾಯ್ದೆಯನ್ನು ರದ್ದುಪಡಿಸಿ, ಹಳೆಯ ನರೇಗಾ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದಿರುವುದಾಗಿ ಸಿಎಂ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಚಲುವರಾಯಸ್ವಾಮಿ, ಲಕ್ಷ್ಮಿ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ್ ಉಪಸ್ಥಿತರಿದ್ದರು.






















