ಬೆಂಗಳೂರು, ಜ.02 www.bengaluruwire.com : ಹೊಸ ವರ್ಷಾಚರಣೆಯ ಸಂಭ್ರಮ ರಾಜ್ಯದ ಬೊಕ್ಕಸವನ್ನು ತುಂಬಿಸಿದೆ. ಡಿಸೆಂಬರ್ 2025 ರಲ್ಲಿ ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ ದಾಖಲೆಯ ಆದಾಯ ಹರಿದುಬಂದಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಹೊಸವರ್ಷಾಚರಣೆಯ ಬಿಸಿ ಏರುತ್ತಿದ್ದಂತೆ ತಣ್ಣಗಾಗುತ್ತಿದ್ದ ‘ಬಿಯರ್’ ಮಾರಾಟದಲ್ಲಿ ಈ ಬಾರಿ ಭಾರೀ ಕುಸಿತ ಕಂಡುಬಂದಿದೆ.
ಬಿಯರ್ ಇಳಿಕೆ, ಆದಾಯ ಏರಿಕೆ:
ಅಬಕಾರಿ ಇಲಾಖೆಯ ವರದಿಯ ಪ್ರಕಾರ, 2024ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ 2025ರ ಡಿಸೆಂಬರ್‌ನಲ್ಲಿ ಭಾರತೀಯ ತಯಾರಿತ ಮದ್ಯ (ಐಎಂಎಲ್) ಮಾರಾಟದಲ್ಲಿ ಏರಿಕೆ ಕಂಡಿದ್ದರೆ, ಬಿಯರ್ ಮಾರಾಟ ಕುಸಿತ ಕಂಡಿದೆ.
ಐಎಂಎಲ್ (IML): 2024ರಲ್ಲಿ 61.82 ಲಕ್ಷ ಕೇಸ್ ಮಾರಾಟವಾಗಿದ್ದರೆ, 2025ರಲ್ಲಿ ಇದು 63.71 ಲಕ್ಷ ಕೇಸ್‌ಗಳಿಗೆ ಏರಿಕೆಯಾಗಿದೆ (ಶೇ.3.06ರಷ್ಟು ಹೆಚ್ಚಳ).

ಬಿಯರ್ (Beer): 2024ರಲ್ಲಿ 37.62 ಲಕ್ಷ ಕೇಸ್ ಮಾರಾಟವಾಗಿದ್ದರೆ, 2025ರಲ್ಲಿ ಇದು 36.14 ಲಕ್ಷ ಕೇಸ್‌ಗಳಿಗೆ ಕುಸಿದಿದೆ (ಶೇ.3.93ರಷ್ಟು ಇಳಿಕೆ).
ಚಳಿಗಾಲದ ವಾತಾವರಣ ಮತ್ತು ಬೆಲೆ ಏರಿಕೆಯ ಬಿಸಿ ಬಿಯರ್ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗಿದೆ. ಆದರೂ, ದುಬಾರಿ ಮದ್ಯಗಳ ಮಾರಾಟ ಹೆಚ್ಚಾಗಿದ್ದರಿಂದ ಆದಾಯದಲ್ಲಿ ಮಾತ್ರ ಭರ್ಜರಿ ಏರಿಕೆ ದಾಖಲಾಗಿದೆ.
ಬೊಕ್ಕಸ ಸೇರಿದ 3,693 ಕೋಟಿ ರೂ.:
ಕೇವಲ ಡಿಸೆಂಬರ್ ತಿಂಗಳೊಂದರಲ್ಲೇ ಅಬಕಾರಿ ಇಲಾಖೆ ಬರೋಬ್ಬರಿ 3,693.30 ಕೋಟಿ ರೂ. ಆದಾಯ ಸಂಗ್ರಹಿಸಿದೆ. 2024ರ ಡಿಸೆಂಬರ್‌ನಲ್ಲಿ 2,837.74 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದೇ ತಿಂಗಳಲ್ಲಿ 855.56 ಕೋಟಿ ರೂ. ಹೆಚ್ಚಿನ ಆದಾಯ (ಶೇ.30.15 ರಷ್ಟು ಪ್ರಗತಿ) ಹರಿದುಬಂದಿದೆ.
ಮೂರು ದಿನದ ಮಜಾ, 745.84 ಕೋಟಿ ವಹಿವಾಟು:
ಹೊಸ ವರ್ಷದ ಮುನ್ನಾ ದಿನಗಳಲ್ಲಿ ಮದ್ಯದ ಹೊಳೆಯೇ ಹರಿದಿದೆ. ಡಿಸೆಂಬರ್ 29, 30 ಮತ್ತು 31ರ ಮೂರು ದಿನಗಳಲ್ಲಿ ರಾಜ್ಯಾದ್ಯಂತ ಬರೋಬ್ಬರಿ 745.84 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಇದರಿಂದ ಅಬಕಾರಿ ಇಲಾಖೆಗೆ 587.51 ಕೋಟಿ ಆದಾಯ ಹರಿದು ಬಂದಿದೆ. 2024 ಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇಕಡ 39.63ರಷ್ಟು ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಇನ್ನು ಕ್ರಿಸ್‌ಮಸ್‌ನಿಂದ ಹೊಸ ವರ್ಷದವರೆಗಿನ (ಡಿಸೆಂಬರ್ 23 ರಿಂದ 31) 9 ದಿನಗಳಲ್ಲಿ ಒಟ್ಟು 1,319.11 ಕೋಟಿ ರೂ. ವಹಿವಾಟು ನಡೆದಿದ್ದು, ಇದು ಇಲಾಖೆಯ ನಿರೀಕ್ಷೆಗೂ ಮೀರಿದ ಸಂಗ್ರಹವಾಗಿದೆ.
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಮಧ್ಯರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗಿತ್ತು, ಆದರೆ ‘ವೀಕೆಂಡ್’ ಬದಲು ವಾರದ ಮಧ್ಯೆ (Midweek) ಹಬ್ಬ ಬಂದಿದ್ದರಿಂದ ಪಬ್‌ಗಳಲ್ಲಿ ಬುಕ್ಕಿಂಗ್ ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು. ಆದರೂ, ಒಟ್ಟಾರೆ ವಹಿವಾಟಿನಲ್ಲಿ ಮದ್ಯಪ್ರಿಯರು ಸರ್ಕಾರಕ್ಕೆ ಭರ್ಜರಿ ‘ಗಿಫ್ಟ್’ ನೀಡಿದ್ದಾರೆ.






















