ಬೆಂಗಳೂರು, ಜ.02 www.bengaluruwire.com : ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಎಂ.ಜಿ.ರಸ್ತೆ ಮತ್ತು ಕಬ್ಬನ್ ರಸ್ತೆಯನ್ನು ಸಂಪರ್ಕಿಸುವ ಕಾಮರಾಜ್ ರಸ್ತೆ ಇದೀಗ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗಿದೆ.
ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರೂವರೆ ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಈ ರಸ್ತೆ, ಜನವರಿ 02 ರಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ನಮ್ಮ ಮೆಟ್ರೋದ ಎಂ.ಜಿ.ರಸ್ತೆ ಭೂಗತ ನಿಲ್ದಾಣದ ನಿರ್ಮಾಣ ಕಾಮಗಾರಿಗಾಗಿ 2019ರ ಜೂನ್ 15 ರಂದು ಕಬ್ಬನ್ ರಸ್ತೆ ಮತ್ತು ಎಂ.ಜಿ.ರಸ್ತೆ ನಡುವಿನ ಕಾಮರಾಜ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಸುದೀರ್ಘ ಕಾಮಗಾರಿಯ ನಂತರ, ಹಂತ ಹಂತವಾಗಿ ರಸ್ತೆಯನ್ನು ತೆರವುಗೊಳಿಸಲಾಗಿದೆ. ರಸ್ತೆಯ ಪಶ್ಚಿಮ ಭಾಗವನ್ನು 2024ರ ಜೂನ್ 14 ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಇದೀಗ ಪೂರ್ವ ಭಾಗದ ಕಾಮಗಾರಿಯೂ ಪೂರ್ಣಗೊಂಡಿದ್ದು, ಜನವರಿ 2 ರಂದು ವಾಹನ ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.
ರಸ್ತೆಯ ವಿಶೇಷತೆಗಳು:

ಪುನರ್ ನಿರ್ಮಿತ ರಸ್ತೆಯು ಒಟ್ಟು 214 ಮೀಟರ್ ಉದ್ದವಿದ್ದು, ಎರಡೂ ಕಡೆಯ ವಾಹನ ಸಂಚಾರ ಮಾರ್ಗಗಳು ತಲಾ ಕನಿಷ್ಠ 11 ಮೀಟರ್ ಅಗಲವನ್ನು ಹೊಂದಿವೆ. ಇದರಿಂದಾಗಿ ವಾಹನಗಳ ದಟ್ಟಣೆ ಕಡಿಮೆಯಾಗಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ.
ಸಂಪರ್ಕ ಸುಧಾರಣೆ:
ಈ ರಸ್ತೆ ಪುನಃ ತೆರೆಯಲ್ಪಟ್ಟಿರುವುದರಿಂದ ವಿಶೇಷವಾಗಿ ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆ ನಡುವಿನ ಸಂಪರ್ಕ ವ್ಯವಸ್ಥೆ ಗಣನೀಯವಾಗಿ ಸುಧಾರಿಸಲಿದೆ. ಸುತ್ತುವರೆದು ಹೋಗಬೇಕಿದ್ದ ವಾಹನ ಸವಾರರಿಗೆ ಇದರಿಂದ ಹೆಚ್ಚಿನ ಸಮಯ ಉಳಿತಾಯವಾಗಲಿದ್ದು, ಈ ಭಾಗದ ಟ್ರಾಫಿಕ್ ಸಮಸ್ಯೆಗೂ ಪರಿಹಾರ ದೊರೆತಂತಾಗಿದೆ.
ನಗರದ ಮೂಲಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ. ಅಷ್ಟೇ ಅಲ್ಲದೆ, ಇಷ್ಟು ವರ್ಷಗಳ ಕಾಲ ಕಾಮಗಾರಿಗಾಗಿ ಸಹಕರಿಸಿದ ಮತ್ತು ತಾಳ್ಮೆ ತೋರಿದ ಸಾರ್ವಜನಿಕರಿಗೆ ನಿಗಮವು ಕೃತಜ್ಞತೆ ಸಲ್ಲಿಸಿದೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















