ಬೆಂಗಳೂರು, ಜ.02 www.bengaluruwire.com : ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸ್ಥಗಿತಗೊಂಡಿದ್ದ ಸಫಾರಿಯನ್ನು ಹಂತ ಹಂತವಾಗಿ ಮತ್ತೆ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಇದೇ ವೇಳೆ, ಸಫಾರಿ ವಾಹನಗಳ ಸಂಚಾರದಿಂದ ವನ್ಯಜೀವಿಗಳು ನಾಡಿಗೆ ಬರುತ್ತಿವೆಯೇ ಎಂಬುದನ್ನು ಪತ್ತೆಹಚ್ಚಲು ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಸಫಾರಿ ನಿಷೇಧ ಮತ್ತು ಚರ್ಚೆ:

ಕಳೆದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹುಲಿ ದಾಳಿಗೆ ಮೂವರು ಬಲಿಯಾಗಿ, ಒಬ್ಬರು ಶಾಶ್ವತವಾಗಿ ವಿಶೇಷ ಚೇತನರಾದ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. “ಸಫಾರಿ ನಿಂತ ಕಳೆದ ಎರಡು ತಿಂಗಳಲ್ಲಿ ಯಾವುದೇ ಹುಲಿ ದಾಳಿ ಅಥವಾ ಜೀವಹಾನಿ ಸಂಭವಿಸಿಲ್ಲ. ಸಫಾರಿ ವಾಹನಗಳ ಶಬ್ದ ಮತ್ತು ಬೆಳಕಿನ ಕಿರಿಕಿರಿಯಿಂದ ಪ್ರಾಣಿಗಳು ಕಾಡಿನಿಂದ ಹೊರಬರುತ್ತಿವೆ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ” ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಭೆಯ ಗಮನಕ್ಕೆ ತಂದರು.
ಹುಲಿಗಳ ಸಂಖ್ಯೆ ಹೆಚ್ಚಳ :
1972ರಲ್ಲಿ ಬಂಡೀಪುರದಲ್ಲಿ ಕೇವಲ 12 ಹುಲಿಗಳಿದ್ದವು, ಈಗ ಅವುಗಳ ಸಂಖ್ಯೆ ಈಗ 175-200ಕ್ಕೆ ಏರಿಕೆಯಾಗಿದೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು ಹತ್ತು ಚದರ ಕಿ.ಮೀ ಪ್ರದೇಶ ಬೇಕು. ಆದರೆ 900 ಚದರ ಕಿ.ಮೀ ವ್ಯಾಪ್ತಿಯಲ್ಲಿ ಇರಬೇಕಾದ ಸಾಮರ್ಥ್ಯಕ್ಕಿಂತ ಎರಡರಷ್ಟು ಹುಲಿಗಳಿರುವುದು ಪ್ರಾಣಿಗಳು ನಾಡಿನತ್ತ ಬರಲು ಪ್ರಮುಖ ಕಾರಣವಾಗಿದೆ ಎಂದು ಸಚಿವರು ವಿವರಿಸಿದರು.
ಅನಿಲ್ ಕುಂಬ್ಳೆ ಸಲಹೆ :
ವನ್ಯಜೀವಿ ಮಂಡಳಿ ಸದಸ್ಯ ಅನಿಲ್ ಕುಂಬ್ಳೆ ಮಾತನಾಡಿ, “ಸಫಾರಿಗೂ ಪ್ರಾಣಿಗಳು ಹೊರಬರುವುದಕ್ಕೂ ಸಂಬಂಧವಿಲ್ಲ. ಕೇವಲ ಶೇ.8 ರಷ್ಟು ಅರಣ್ಯ ಪ್ರದೇಶ ಸಫಾರಿಗೆ ಬಳಕೆಯಾಗುತ್ತಿದೆ. ಇದನ್ನು ನಂಬಿ ಸ್ಥಳೀಯರ ಜೀವನೋಪಾಯವೂ ಸಾಗುತ್ತಿದೆ,” ಎಂದು ಸಫಾರಿ ಪುನಾರಂಭಕ್ಕೆ ಮನವಿ ಮಾಡಿದರು. ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.
ಎಲ್ಲರ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿಗಳು, ಸಫಾರಿಯನ್ನು ಹಂತ ಹಂತವಾಗಿ ಆರಂಭಿಸಲು ಹಾಗೂ ವನ್ಯಜೀವಿಗಳು ನಾಡಿಗೆ ಬರಲು ಕಾರಣವೇನು ಮತ್ತು ಸಫಾರಿ ವಾಹನಗಳ ಧಾರಣಾ ಸಾಮರ್ಥ್ಯದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸುವಂತೆ ಆದೇಶಿಸಿದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















