ಬೆಂಗಳೂರು, ಡಿ.31 www.bengaluruwire.com : ಜಮೀನು ತಂಟೆ-ತಕರಾರುಗಳಿಗೆ ಸಂಬಂಧಿಸಿದಂತೆ ತಾಲೂಕು ಕಚೇರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಅಲೆದು ಸುಸ್ತಾಗಿದ್ದ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಕಂದಾಯ ನ್ಯಾಯಾಲಯಗಳ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿರುವ ಕಂದಾಯ ಇಲಾಖೆ, ಇನ್ಮುಂದೆ ಕಂದಾಯ ನ್ಯಾಯಾಲಯದ ಕಲಾಪಗಳನ್ನು ‘ಆನ್‌ಲೈನ್’ (Online Revenue Courts) ಮೂಲಕ ನಡೆಸಲು ಆದೇಶ ಹೊರಡಿಸಿದೆ.
ಈ ಹೊಸ ವ್ಯವಸ್ಥೆಯ ಮೂಲಕ ವಾದಿ ಮತ್ತು ಪ್ರತಿವಾದಿಗಳು ಮನೆಯಲ್ಲಿ ಕುಳಿತೇ ತಮ್ಮ ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಲ್ಲದೆ, ಪ್ರಾಯೋಗಿಕವಾಗಿ (Pilot Basis) ನ್ಯಾಯಾಲಯದ ಕಲಾಪಗಳನ್ನು ‘ಲೈವ್ ಸ್ಟ್ರೀಮಿಂಗ್’ (ನೇರ ಪ್ರಸಾರ) ಮಾಡಲು ಸರ್ಕಾರ ನಿರ್ಧರಿಸಿದೆ.
ಏನಿದು ಹೊಸ ಬದಲಾವಣೆ? :

ಈ ಹಿಂದೆ ಕಂದಾಯ ನ್ಯಾಯಾಲಯಗಳನ್ನು ನಡೆಸಲು ಸ್ಪಷ್ಟವಾದ ನಿಯಮಗಳಿರಲಿಲ್ಲ. ಅನೇಕ ಬಾರಿ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ಆದೇಶ ನೀಡಿದ ಉದಾಹರಣೆಗಳಿದ್ದವು. ಇದನ್ನು ತಡೆಗಟ್ಟಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆಯು ಆರ್‌ಸಿಸಿಎಂಎಸ್ (RCCMS) ಸೇರಿದಂತೆ ಡಿಜಿಟಲೀಕರಣಕ್ಕೆ ಒತ್ತು ನೀಡಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ವಿಚಾರಣೆಯನ್ನೂ ಆನ್‌ಲೈನ್ ಮಾಡಲು ಮುಂದಾಗಿದೆ.
ಜನರಿಗೇನು ಲಾಭ? :
* ಅಲೆದಾಟಕ್ಕೆ ಬ್ರೇಕ್: ಕಂದಾಯ ನ್ಯಾಯಾಲಯದ ವಿಚಾರಣೆಗಾಗಿ ಜನರು ಪದೇ ಪದೇ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ.
* ವಿಡಿಯೋ ಕಾನ್ಫರೆನ್ಸ್: ಪಕ್ಷಗಾರರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಬಹುದು.
* ಪಾರದರ್ಶಕತೆ: ಕಲಾಪಗಳ ನೇರ ಪ್ರಸಾರ ಇರುವುದರಿಂದ ಯಾರು, ಯಾವ ರೀತಿ ಆದೇಶ ನೀಡುತ್ತಿದ್ದಾರೆ ಎಂಬುದು ಬಹಿರಂಗವಾಗಲಿದ್ದು, ದುಷ್ಕೃತ್ಯಗಳಿಗೆ ಕಡಿವಾಣ ಬೀಳಲಿದೆ.
ಹಂತ ಹಂತವಾಗಿ ವಿಸ್ತರಣೆ :
ಸರ್ಕಾರ ಮತ್ತು ನಾಗರಿಕರ ನಡುವೆ ವಿಶ್ವಾಸವನ್ನು ಬಲಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ಲೈವ್ ಮಾಡ್ಯೂಲ್ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಅಲ್ಲಿ ಸಿಗುವ ಪ್ರತಿಕ್ರಿಯೆ ಮತ್ತು ಯಶಸ್ಸಿನ ಆಧಾರದ ಮೇಲೆ ರಾಜ್ಯದಾದ್ಯಂತ ಈ ಯೋಜನೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಕಂದಾಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಗ್ರಾಮ ಆಡಳಿತ ಅಧಿಕಾರಿಗಳಿಗೆ (VA) ಲ್ಯಾಪ್‌ಟಾಪ್ ನೀಡುವುದು ಮತ್ತು ಭೂ ಸುರಕ್ಷಾ ಯೋಜನೆಯಡಿ ಆನ್‌ಲೈನ್‌ನಲ್ಲೇ ದಾಖಲೆ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ನ್ಯಾಯಾಲಯಗಳನ್ನೂ ಆನ್‌ಲೈನ್ ವ್ಯಾಪ್ತಿಗೆ ತರುವ ಮೂಲಕ ಇ-ಆಡಳಿತಕ್ಕೆ ಸರ್ಕಾರ ಒತ್ತು ನೀಡಿದೆ.























