ನವದೆಹಲಿ, ಡಿ.29 www.bengaluruwire.com : ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮುದ್ದಿನ ಮಗಳು ಮಾಲ್ತಿ ಮೇರಿ ಜೊತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ಚಳಿಗಾಲದ ರಜಾದಿನಗಳನ್ನು ಕಳೆಯುತ್ತಿರುವ ಪ್ರಿಯಾಂಕಾ, ಹಿಮದಲ್ಲಿ ಮಗಳಾಟವನ್ನು ಕಂಡು ಸಂಭ್ರಮಿಸುತ್ತಿರುವ ಫೋಟೋ ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹಿಮದಲ್ಲಿ ಮಗಳಾಟ, ಅಮ್ಮನ ಸಂಭ್ರಮ :
ಬಿಳಿಯ ಬಣ್ಣದ ವಿಂಟರ್ ಜಾಕೆಟ್ ಧರಿಸಿ ಹಿಮ ಆವರಿಸಿದ ರಸ್ತೆಯಲ್ಲಿ ಪುಟಾಣಿ ಮಾಲ್ತಿ ಮೇರಿ ಓಡಾಡುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಅಮ್ಮನ ಕೈ ಹಿಡಿದು ಹಿಮದಲ್ಲಿ ಹೆಜ್ಜೆ ಹಾಕುವ ಮಾಲ್ತಿ, ತನ್ನ ಪುಟ್ಟ ಹೆಜ್ಜೆ ಗುರುತುಗಳನ್ನು ನೋಡಿ ಬೀರುವ ನಗು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋಗೆ ಅಡಿಬರಹ ನೀಡಿರುವ ಪ್ರಿಯಾಂಕಾ, “ಕೆಲವೊಮ್ಮೆ ಸಂತೋಷವು ಆಕಾಶದಿಂದಲೇ ಬೀಳುತ್ತದೆ ಎಂಬುದಕ್ಕೆ ಇದೇ ಸಾಕ್ಷಿ,” ಎಂದು ಬರೆದುಕೊಂಡಿದ್ದಾರೆ.

ಹಿಮದ ಮೇಲೆ 2026ಕ್ಕೆ ಸ್ವಾಗತ:
ಇನ್ನೊಂದು ಪೋಸ್ಟ್‌ನಲ್ಲಿ ರಾತ್ರಿಯ ವೇಳೆ ಬೆಂಕಿಯ (Bonfire) ಮುಂದೆ ಕುಳಿತಿರುವ ಮತ್ತು ಹಿಮದ ಹಾದಿಯಲ್ಲಿ ಡ್ರೈವ್ ಮಾಡುತ್ತಿರುವ ದೃಶ್ಯಗಳಿವೆ. ವಿಶೇಷವೆಂದರೆ, ಪ್ರಿಯಾಂಕಾ ಅವರು ಹಿಮದ ಮೇಲೆ ‘2026’ ಎಂದು ಬರೆಯುವ ಮೂಲಕ ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿರುವುದನ್ನು ಸೂಚಿಸಿದ್ದಾರೆ. ಈ ಪ್ರವಾಸದಲ್ಲಿ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಕೂಡ ಸಾಥ್ ನೀಡಿದ್ದಾರೆ.
ನೆಟ್ ನಲ್ಲಿ ಅಭಿಮಾನಿಗಳ ಹಾರೈಕೆ
ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದು, “ಇದು 2025ರ ಅತ್ಯುತ್ತಮ ವಿಡಿಯೋ,” ಎಂದು ಬಣ್ಣಿಸಿದ್ದಾರೆ. “ಎಂತಹ ಸುಂದರ ಮುಕ್ತಾಯ,” ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಪುಟ್ಟ ಮಾಲ್ತಿಗೆ ದೃಷ್ಟಿಯಾಗದಂತೆ ಹಾರೈಸಿದ್ದಾರೆ.
ಪ್ರಿಯಾಂಕ ವೃತ್ತಿಜೀವನ ಮತ್ತು ಕುಟುಂಬ :
2018ರಲ್ಲಿ ನಿಕ್ ಜೋನಾಸ್ ಅವರನ್ನು ವರಿಸಿದ ಪ್ರಿಯಾಂಕಾ, 2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿಯನ್ನು ಬರಮಾಡಿಕೊಂಡರು. ಇತ್ತೀಚೆಗಷ್ಟೇ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ ಶೋ ಸೀಸನ್ 4’ ಗಾಗಿ ಭಾರತಕ್ಕೆ ಭೇಟಿ ನೀಡಿದ್ದ ಅವರು, ಸದ್ಯ ಎಸ್.ಎಸ್. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ‘ವಾರಣಾಸಿ’ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಈ ಚಿತ್ರದಲ್ಲಿ ತಮ್ಮ ತೆಲುಗು ಸಂಭಾಷಣೆಗೆ ತಾವೇ ಡಬ್ ಮಾಡುವುದಾಗಿಯೂ ಅವರು ಖಚಿತಪಡಿಸಿದ್ದಾರೆ.






















