ಬೆಂಗಳೂರು, ಡಿ.29 www.bengaluruwire.com : ದೇಶದ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು (IAF) ಮಹತ್ವದ ಹೆಜ್ಜೆಯನ್ನಿಟ್ಟಿದೆ.
ವಾಯುಪಡೆಯ ವಿಮಾನಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಹಾಗೂ ಸುರಕ್ಷಿತ ಡಿಜಿಟಲ್ ಸಂಪರ್ಕ ವ್ಯವಸ್ಥೆಯನ್ನು (Digital Secure Communication System) ದೇಶೀಯವಾಗಿಯೇ ಅಭಿವೃದ್ಧಿಪಡಿಸಲು ಬೆಂಗಳೂರಿನಲ್ಲಿರುವ ವಾಯುಪಡೆಯ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ (SDI), ಐಐಟಿ ಮದ್ರಾಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಐ ಕಮಾಂಡೆಂಟ್ ಏರ್ ವೈಸ್ ಮಾರ್ಷಲ್ ಆರ್. ಗುರುಹರಿ, ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಮತ್ತು ಪ್ರವರ್ತಕ್ ಟೆಕ್ನಾಲಜೀಸ್ ಸಿಇಒ ಡಾ. ಎಂ.ಜೆ. ಶಂಕರ್ ರಾಮನ್ ಅವರು ಈ ಮಹತ್ವದ ತಿಳುವಳಿಕೆ ಪತ್ರಕ್ಕೆ (MoU) ಸಹಿ ಹಾಕಿದರು.
ಏನಿದು ಐಐಟಿ ಮದ್ರಾಸ್ ಜೊತೆಗಿನ ಒಪ್ಪಂದ? :

ಈ ಒಪ್ಪಂದದ ಪ್ರಕಾರ, ಐಐಟಿ ಮದ್ರಾಸ್ ತನ್ನ ಶೈಕ್ಷಣಿಕ ಪರಿಣತಿ ಮತ್ತು ಸಂಶೋಧನಾ ಸೌಲಭ್ಯಗಳನ್ನು ಬಳಸಿ, ವಾಯುಪಡೆಗೆ ಅಗತ್ಯವಿರುವ ನೆಟ್‌ವರ್ಕಿಂಗ್ ಮತ್ತು ಎನ್‌ಕ್ರಿಪ್ಶನ್ (Encryption) ಅಲ್ಗಾರಿದಮ್‌ಗಳನ್ನು ಅಭಿವೃದ್ಧಿಪಡಿಸಲಿದೆ. ಯುದ್ಧದ ಸನ್ನಿವೇಶಗಳಲ್ಲಿ ಅಥವಾ ಕಾರ್ಯಾಚರಣೆಯ ಸಮಯದಲ್ಲಿ ವಿಮಾನಗಳ ನಡುವೆ ಸುರಕ್ಷಿತವಾಗಿ ಹಾಗೂ ವೇಗವಾಗಿ ಮಾಹಿತಿ ವಿನಿಮಯ ಮಾಡಲು ಈ ತಂತ್ರಜ್ಞಾನ ಅತ್ಯಗತ್ಯ.
ಸ್ವಾವಲಂಬನೆಯತ್ತ ದಾಪುಗಾಲು :
ಈ ಸಂದರ್ಭದಲ್ಲಿ ಮಾತನಾಡಿದ ಏರ್ ವೈಸ್ ಮಾರ್ಷಲ್ ಗುರುಹರಿ, “ಇದು ರಕ್ಷಣಾ ಸಂಪರ್ಕ ತಂತ್ರಜ್ಞಾನದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವತ್ತ ಇಟ್ಟಿರುವ ದೂರದೃಷ್ಟಿಯ ಹೆಜ್ಜೆ,” ಎಂದರು. ಐಐಟಿ ಮದ್ರಾಸ್ ನಿರ್ದೇಶಕ ಪ್ರೊ. ಕಾಮಕೋಟಿ ಅವರು, “ಶಿಕ್ಷಣ ಸಂಸ್ಥೆಗಳು ಮತ್ತು ರಕ್ಷಣಾ ಸಂಸ್ಥೆಗಳ ನಡುವಿನ ಈ ಬಾಂಧವ್ಯವು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ದೇಶೀಯ ತಂತ್ರಜ್ಞಾನಗಳ ಸೃಷ್ಟಿಗೆ ನಾಂದಿ ಹಾಡಲಿದೆ,” ಎಂದು ಹರ್ಷ ವ್ಯಕ್ತಪಡಿಸಿದರು. ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.






















