ಬೆಂಗಳೂರು, ಡಿ.29 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರು 2026ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಡಿ.31ರ ರಾತ್ರಿ ಸಾರ್ವಜನಿಕರ ಅನುಕೂಲಕ್ಕಾಗಿ ‘ನಮ್ಮ ಮೆಟ್ರೋ’ ಹಾಗೂ ಬಿಎಂಟಿಸಿ ಬಸ್ ಸಂಚಾರದ ಅವಧಿಯನ್ನು ವಿಸ್ತರಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ನಗರದಾದ್ಯಂತ 20 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಹೈ ಅಲರ್ಟ್ ಘೋಷಿಸಲಾಗಿದೆ.
ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಾರಿಗೆ ನಿಗಮಗಳು ವಿಶೇಷ ವ್ಯವಸ್ಥೆ ಕಲ್ಪಿಸಿವೆ.
ಖಾಕಿ ಕಣ್ಗಾವಲು: 50 ಫ್ಲೈ ಓವರ್‌ಗಳ ಮೇಲೆ ಬೈಕ್ ಬ್ಯಾನ್:

ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಭದ್ರತೆಗಾಗಿ ನಗರದಲ್ಲಿ 20,000 ಸಿವಿಲ್ ಪೊಲೀಸರು, ಹೊರ ಜಿಲ್ಲೆಗಳಿಂದ 1200 ಸಿಬ್ಬಂದಿ ಹಾಗೂ ಚೆನ್ನಮ್ಮ ಪಡೆಗಳನ್ನು ನಿಯೋಜಿಸಲಾಗಿದೆ.

ನಗರದ 50 ಫ್ಲೈ ಓವರ್‌ಗಳಲ್ಲಿ ಡಿ.31ರ ರಾತ್ರಿ ದ್ವಿಚಕ್ರ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮಹಿಳೆಯರ ರಕ್ಷಣೆಗಾಗಿ 164 ಪ್ರತ್ಯೇಕ ಹೆಲ್ಪ್ ಡೆಸ್ಕ್, 4 ಕಂಟ್ರೋಲ್ ರೂಂ, 78 ಕಾವಲು ಗೋಪುರ ಹಾಗೂ 55 ಅಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಕಳೆದ ಮೂರು ದಿನಗಳಲ್ಲಿ ಈಗಾಗಲೇ 3,500 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ದಾಖಲಾಗಿದ್ದು, ಅಂದು ರಾತ್ರಿ ತಪಾಸಣೆ ತೀವ್ರಗೊಳ್ಳಲಿದೆ. ವ್ಹೀಲಿಂಗ್ ಹಾಗೂ ಮಾದಕ ವಸ್ತು ಮಾರಾಟ/ಸೇವನೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ.
ಮೆಟ್ರೋ ಸಂಚಾರದ ಅವಧಿ ವಿಸ್ತರಣೆ: ಪ್ರಯಾಣಿಕರಿಗೆ ಪ್ರಮುಖ ಸೂಚನೆ
ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಜನರಿಗಾಗಿ ನಮ್ಮ ಮೆಟ್ರೋ ಸೇವೆಯನ್ನು ಜನವರಿ 1, 2026ರ ನಸುಕಿನ ಜಾವದವರೆಗೂ ವಿಸ್ತರಿಸಲಾಗಿದೆ. ನೇರಳೆ ಮತ್ತು ಹಸಿರು ಮಾರ್ಗದಲ್ಲಿ ರೈಲುಗಳು ರಾತ್ರಿ 1:45 ರಿಂದ 2:00 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ.

ಕೊನೆಯ ರೈಲು ಸಮಯ: ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ (Majestic) ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಬೆಳಗಿನ ಜಾವ 2:45ಕ್ಕೆ ಹೊರಡಲಿದೆ. ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟಕ್ಕೆ 1:45ಕ್ಕೆ, ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ 2:00 ಗಂಟೆಗೆ ಕೊನೆಯ ರೈಲು ಲಭ್ಯವಿರುತ್ತದೆ. ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ತಲಾ ಬೆಳಗಿನ ಜಾವ 2:00 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ. ಹಳದಿ ಮಾರ್ಗದಲ್ಲಿ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ 3:10 ರವರೆಗೆ ರೈಲು ಲಭ್ಯವಿರಲಿದೆ.
ಎಂ.ಜಿ ರಸ್ತೆ ನಿಲ್ದಾಣ ಬಂದ್: ಎಂ.ಜಿ.ರಸ್ತೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಕಾರಣ, ಸುರಕ್ಷತಾ ದೃಷ್ಟಿಯಿಂದ ಡಿ.31ರ ರಾತ್ರಿ 10 ಗಂಟೆಗೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರು ಪಕ್ಕದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣಗಳನ್ನು ಬಳಸಬೇಕಾಗುತ್ತದೆ.
ಟಿಕೆಟ್ ವ್ಯವಸ್ಥೆ: ರಾತ್ರಿ 11 ಗಂಟೆಯ ನಂತರ ಟಿಕೆಟ್ ಕೌಂಟರ್‌ಗಳಲ್ಲಿ ಟೋಕನ್ ವಿತರಣೆ ಇರುವುದಿಲ್ಲ. ಕ್ಯೂಆರ್ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ಬಳಸಲು ಸೂಚಿಸಲಾಗಿದೆ.
ಬಿಎಂಟಿಸಿ ನೈಟ್ ಬಸ್ ಸೇವೆ: 70 ಹೆಚ್ಚುವರಿ ಬಸ್‌ಗಳ ಸಂಚಾರ :
ಹೊಸ ವರ್ಷಾಚರಣೆ ಮುಗಿಸಿ ಮನೆಗೆ ತೆರಳುವವರಿಗಾಗಿ ಬಿಎಂಟಿಸಿ ‘ಬಿಗ್ ಕನೆಕ್ಟ್’ ಯೋಜನೆಯಡಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಂದ ನಗರದ ವಿವಿಧೆಡೆಗೆ ತಡರಾತ್ರಿ 2 ಗಂಟೆಯವರೆಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ (G-3), ಜಿಗಣಿ (G-4), ಕೆಂಗೇರಿ ಹೌಸಿಂಗ್ ಬೋರ್ಡ್ (G-6), ಜನಪ್ರಿಯ ಟೌನ್‌ಶಿಪ್ (G-7), ನೆಲಮಂಗಲ (G-8), ಯಲಹಂಕ ಉಪನಗರ (G-9), ಯಲಹಂಕ (G-10) ಹಾಗೂ ಬಾಗಲೂರು (G-11) ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸಲಿವೆ.
ಅಲ್ಲದೆ, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಸರ್ಜಾಪುರಕ್ಕೆ (G-2) ಹಾಗೂ ಇತರೆಡೆಗಳಿಂದ ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ, ಸಿಲ್ಕ್ ಬೋರ್ಡ್ ಮತ್ತು ಕೋರಮಂಗಲ ಕಡೆಗೆ ಒಟ್ಟು 70 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುತ್ತದೆ. ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ಪ್ರಮುಖ ನಿಲ್ದಾಣಗಳಿಂದಲೂ ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇರಲಿದೆ. (Main Image Courtesy : Gemini AI)






















