ಬೆಂಗಳೂರು, ಡಿ.27 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಅಧಿಕಾರಿಗಳು ಮತ್ತು ನೌಕರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಪಾಲಿಕೆ ನೌಕರರ ಸಂಘವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗಂಭೀರ ಆರೋಪ ಮಾಡಿದೆ.
“ಮೂರ್ಖ, ದಡ್ಡ, ತಲೆ ಇಲ್ಲ ಹಾಗೂ I Will kill You, I Will Hang You” ಎಂಬ ಪದಗಳನ್ನು ಬಳಸುವ ಮೂಲಕ ಅಧಿಕಾರಿಗಳ ತೇಜೋವಧೆ ಮಾಡಲಾಗುತ್ತಿದೆ ಎಂದು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಿತ್ಯ ವಿಡಿಯೋ ಸಂವಾದದಲ್ಲಿ ‘ಅವಾಚ್ಯ’ ದರ್ಬಾರ್:
ಕಳೆದ 2 ವರ್ಷ 8 ತಿಂಗಳುಗಳಿಂದ ಕಂದಾಯ ವಿಭಾಗದಲ್ಲಿ ಅವೈಜ್ಞಾನಿಕ ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ಪ್ರತಿದಿನ ಬೆಳಗ್ಗೆ 8:30ಕ್ಕೆ ನಡೆಯುವ ವಿಡಿಯೋ ಸಂವಾದದಲ್ಲಿ ಉನ್ನತ ಅಧಿಕಾರಿಗಳಿಂದ ಹಿಡಿದು ಕಂದಾಯ ವಸೂಲಿಗಾರರವರೆಗಿನ ಸಿಬ್ಬಂದಿಯನ್ನು “ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಲಾಗುತ್ತಿದೆ” ಎಂದು ಸಂಘ ಆರೋಪಿಸಿದೆ.

ಬೆಳಗಿನ ಜಾವದ ಈ ಸಭೆಗಳ ಸಮಯದಲ್ಲಿ ನೌಕರರು ಮನೆಯಲ್ಲಿರುತ್ತಾರೆ. ಅಧಿಕಾರಿಗಳು ಬಳಸುವ ಇಂತಹ ಕೆಟ್ಟ ಪದಗಳನ್ನು ಮನೆಯಲ್ಲಿರುವ ತಂದೆ-ತಾಯಿ, ಪತಿ-ಪತ್ನಿ ಮತ್ತು ಮಕ್ಕಳು ಕೇಳಿಸಿಕೊಳ್ಳುವಂತಾಗಿದ್ದು, ಇದರಿಂದ ಕುಟುಂಬಸ್ಥರು ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ಅಳಲು ತೋಡಿಕೊಳ್ಳಲಾಗಿದೆ.
ಒತ್ತಡಕ್ಕೆ ಬಲಿಯಾಗುತ್ತಿದೆ ನೌಕರರ ಜೀವ :
ಪಾಲಿಕೆಯಲ್ಲಿ 1976ರ ವೃಂದ ಮತ್ತು ನೇಮಕಾತಿ ನಿಯಮಾವಳಿ ಪ್ರಕಾರ 12,000 ಮಂಜೂರಾತಿ ಹುದ್ದೆಗಳಿದ್ದರೂ, ಪ್ರಸ್ತುತ ಕೇವಲ 3,200 ನೌಕರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 8,800 ಹುದ್ದೆಗಳು ಖಾಲಿ ಬಿದ್ದಿವೆ. ಇಷ್ಟೊಂದು ಸಿಬ್ಬಂದಿ ಕೊರತೆಯ ನಡುವೆಯೂ ನೌಕರರು ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲಸದ ವಿಪರೀತ ಒತ್ತಡದಿಂದಾಗಿ 2025ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳೊಂದರಲ್ಲೇ ಕಂದಾಯ ಇಲಾಖೆಯ 6 ಅಧಿಕಾರಿ ಮತ್ತು ನೌಕರರು ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಸಂಘವು ಡಿಸಿಎಂ ಗಮನಕ್ಕೆ ತಂದಿದೆ.
ನೌಕರರ ಸಂಘದ ಮನವಿ ಏನು? :
ವಿಶೇಷ ಆಯುಕ್ತರು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು, ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡಲೇ ಮಧ್ಯಪ್ರವೇಶಿಸಬೇಕು. ಕಂದಾಯ ಇಲಾಖೆಯ ಸಿಬ್ಬಂದಿಯ ಅಳಲನ್ನು ಆಲಿಸಲು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಬೇಕು ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಮನವಿ ಮಾಡಿದ್ದಾರೆ.






















