ಬೆಂಗಳೂರು, ಡಿ.27 www.bengaluruwire.com : ಹೊಸ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೋಟೆಲ್, ಪಬ್, ಬಾರ್ ಹಾಗೂ ಕ್ಲಬ್ ಮಾಲೀಕರ ಸಭೆ ನಡೆಸಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
2026ರ ನೂತನ ವರ್ಷಾಚರಣೆಗೆ ಡಿಸೆಂಬರ್ 31 ರಂದು ನಡೆಯುವ ಪಾರ್ಟಿಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನೀಡಿರುವ ಪ್ರಮುಖ ಸೂಚನೆಗಳು ಇಲ್ಲಿವೆ:
ಸಮಯ ಮತ್ತು ಶಬ್ದಮಿತಿ: ಹೊಸ ವರ್ಷಾಚರಣೆಗೆ ಸರ್ಕಾರ ನಿಗದಿಪಡಿಸಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಧ್ವನಿವರ್ಧಕಗಳ ಶಬ್ದವು ನಿಗದಿತ ಮಿತಿಯನ್ನು ಮೀರಬಾರದು.
ಶೂನ್ಯ ಮಾದಕ ವಸ್ತು: ಪಬ್ ಅಥವಾ ಪಾರ್ಟಿಗಳಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆ ಕಂಡುಬಂದಲ್ಲಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ‘ನೋ ಡ್ರಗ್ಸ್’ ಹಾಗೂ ‘ಧೂಮಪಾನ ನಿಷೇಧ’ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ಗುಂಪು ಸೇರಿ ರೇವ್ ಪಾರ್ಟಿಗಳನ್ನು ನಡೆಸುವಂತಿಲ್ಲ.

ಕಣ್ಗಾವಲು ಮತ್ತು ಸಿಬ್ಬಂದಿ: ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ದೃಶ್ಯಾವಳಿಗಳನ್ನು ಕನಿಷ್ಠ 30 ದಿನಗಳವರೆಗೆ ಸಂಗ್ರಹಿಸಿಡಬೇಕು. ಭದ್ರತೆಗೆ ನೇಮಿಸುವ ಬೌನ್ಸರ್‌ಗಳು ಹಾಗೂ ಡಿಜೆಗಳ ವಿವರಗಳನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ನೀಡಬೇಕು.
ಗ್ರಾಹಕರ ಸುರಕ್ಷತೆ: ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡುವಂತಿಲ್ಲ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಬೇಕು. ಮಹಿಳೆಯರ ತಪಾಸಣೆಯನ್ನು ಮಹಿಳಾ ಸಿಬ್ಬಂದಿಯೇ ಮಾಡಬೇಕು.
ಪಾರ್ಕಿಂಗ್ ಮತ್ತು ಡ್ರಾಪ್: ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಪಾರ್ಟಿ ಮುಗಿದ ನಂತರ ಗ್ರಾಹಕರು ಸುರಕ್ಷಿತವಾಗಿ ಮನೆ ತಲುಪುವಂತೆ ನೋಡಿಕೊಳ್ಳುವುದು ಹೋಟೆಲ್/ಪಬ್‌ಗಳ ಜವಾಬ್ದಾರಿಯಾಗಿದೆ.
ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.






















