ಬೆಂಗಳೂರು, ಡಿ.26 www.bengaluruwire.com : ಸಿಲಿಕಾನ್ ಸಿಟಿಯ ಜನನಿಬಿಡ ಪ್ರದೇಶದ ಮನೆಯೊಂದರಲ್ಲಿ ಬೃಹತ್ ಗಾತ್ರದ ಉಡವೊಂದು (Monitor Lizard) ಪ್ರತ್ಯಕ್ಷವಾಗಿ, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಸುಮನಹಳ್ಳಿಯಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಮನೆಯ ಮೂಲೆಯೊಂದರಲ್ಲಿ ಅವಿತು ಕುಳಿತಿದ್ದ ಈ ಸರೀಸೃಪವನ್ನು ಕಂಡ ಜನರು, ಇದ್ಯಾವುದೋ ‘ವಿಚಿತ್ರ ಪ್ರಾಣಿ’ ಎಂದು ಭಾವಿಸಿ ಕಂಗಾಲಾಗಿದ್ದರು. ಆದರೆ, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪ್ರಾಣಿ ರಕ್ಷಕರು ಸುರಕ್ಷಿತವಾಗಿ ಉಡವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ದಿನಗಳಿಂದ ಮನೆಯಲ್ಲೇ ಅವಿತು ಕುಳಿತಿದ್ದ ಉಡ :
ಸುಮನಹಳ್ಳಿಯ ನಿವಾಸವೊಂದರಲ್ಲಿ ಕಾಣಿಸಿಕೊಂಡ ಈ ಉಡ, ಸುಮಾರು 4 ಅಡಿ ಉದ್ದವಿದ್ದು, ಜನರನ್ನು ನೋಡಿದ ತಕ್ಷಣ ಭಯಗೊಂಡು ಅಡಗಿಕೊಂಡಿತ್ತು. ಮನೆಯವರು ಮತ್ತು ಅಕ್ಕಪಕ್ಕದ ನಿವಾಸಿಗಳು ಇದನ್ನು ಕಂಡು ಗಾಬರಿಗೊಂಡಿದ್ದರು. ತಕ್ಷಣವೇ ಈ ಬಗ್ಗೆ ಬೆಂಗಳೂರು ನಗರ ಜಿಲ್ಲೆಯ ಪ್ರಾಣಿ ಕಲ್ಯಾಣ ಪರಿಪಾಲಕರು ಹಾಗೂ ಪ್ರಾಣಿ ಸಂರಕ್ಷಕರಾದ ಎ. ಪ್ರಸನ್ನಕುಮಾರ್ ಅವರಿಗೆ ಮಾಹಿತಿ ನೀಡಲಾಯಿತು.

ಯಶಸ್ವಿ ಕಾರ್ಯಾಚರಣೆ :
ಮಾಹಿತಿ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ವನ್ಯಜೀವಿ ಕಾರ್ಯಕರ್ತ ಎ. ಪ್ರಸನ್ನಕುಮಾರ್, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇದು ಅಪಾಯಕಾರಿಯಲ್ಲದ ಆದರೆ ರಕ್ಷಣೆಯ ಅಗತ್ಯವಿರುವ ಉಡ ಎಂಬುದನ್ನು ಖಾತ್ರಿಪಡಿಸಿಕೊಂಡ ಅವರು, ಅದನ್ನು ಸೆರೆಹಿಡಿದರು. ಬಳಿಕ ಜನವಸತಿ ಇಲ್ಲದ ಸೂಕ್ತವಾದ ನೈಸರ್ಗಿಕ ಆವಾಸಸ್ಥಾನದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.
ಉಡದ ವಿಶೇಷತೆಗಳೇನು? :
ರಕ್ಷಿಸಲ್ಪಟ್ಟ ಉಡವು ಸುಮಾರು 7 ರಿಂದ 8 ವರ್ಷ ವಯಸ್ಸಿನದ್ದಾಗಿದ್ದು, ಬರೋಬ್ಬರಿ ಆರೂವರೆ ಕೆ.ಜಿ (2.5 Kg) ತೂಕವಿತ್ತು ಎಂದು ಪ್ರಸನ್ನಕುಮಾರ್ ತಿಳಿಸಿದ್ದಾರೆ. ಸಾಮಾನ್ಯವಾಗಿ ದಟ್ಟ ಕಾಡುಗಳು ಅಥವಾ ಮರುಭೂಮಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಜೀವಿಗಳು, ಬೆಂಗಳೂರಿನಂತಹ ಕಾಂಕ್ರೀಟ್ ಕಾಡಿನಲ್ಲಿ ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ.
ಅಳಿವಿನಂಚಿನ ಜೀವಿ :
ಈ ಉಡವು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಬರುವ ಸಂರಕ್ಷಿತ ಸರೀಸೃಪವಾಗಿದೆ. ಇವುಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಗರ ಪ್ರದೇಶಗಳಲ್ಲಿ ಇಂತಹ ಜೀವಿಗಳು ಕಂಡುಬಂದಾಗ ಸಾರ್ವಜನಿಕರು ಅವುಗಳಿಗೆ ತೊಂದರೆ ನೀಡದೆ, ತಕ್ಷಣವೇ ಅರಣ್ಯ ಇಲಾಖೆ ಅಥವಾ ಪ್ರಾಣಿ ಸಂರಕ್ಷಕರನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಲಾಗಿದೆ.






















