ನವದೆಹಲಿ, ಡಿ.23 www.bengaluruwire.com : 2026ರ ಏಪ್ರಿಲ್ 1 ರಿಂದ ಆದಾಯ ತೆರಿಗೆ ಇಲಾಖೆಯು (Income Tax Department) ತೆರಿಗೆ ವಂಚನೆಯನ್ನು ತಡೆಗಟ್ಟಲು ಸಾರ್ವಜನಿಕರ ಸೋಶಿಯಲ್ ಮೀಡಿಯಾ ಖಾತೆಗಳು, ಇಮೇಲ್ ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಶೀಲಿಸುವ ‘ಅಧಿಕಾರ’ವನ್ನು ಹೊಂದಲಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘@IndianTechGuide’ ಎಂಬ ಎಕ್ಸ್ (ಟ್ವಿಟರ್) ಖಾತೆಯ ಪೋಸ್ಟ್ ಒಂದನ್ನು ಉಲ್ಲೇಖಿಸಿ ಈ ಸುದ್ದಿ ವೈರಲ್ ಆಗಿದ್ದು, ಇದು ಸಾರ್ವಜನಿಕರಲ್ಲಿ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿತ್ತು.
ಆದರೆ, ಈ ಸುದ್ದಿಯ ಬಗ್ಗೆ ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB Fact Check) ಮಹತ್ವದ ಸ್ಪಷ್ಟನೆ ನೀಡಿದ್ದು, ವೈರಲ್ ಆಗುತ್ತಿರುವ ಮಾಹಿತಿ ದಾರಿತಪ್ಪಿಸುವಂತಿದೆ ಎಂದು ತಿಳಿಸಿದೆ.
ಪಿಐಬಿ ಸ್ಪಷ್ಟನೆ ಏನು?:

ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುದ್ದಿಯು ಸಂಪೂರ್ಣವಾಗಿ ತಪ್ಪುದಾರಿಗೆ ಎಳೆಯುವಂತಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಖಚಿತಪಡಿಸಿದೆ. ಆದಾಯ ತೆರಿಗೆ ಇಲಾಖೆಯು ಸಾಮಾನ್ಯ ನಾಗರಿಕರ ಖಾಸಗಿ ಡಿಜಿಟಲ್ ಮಾಹಿತಿಗಳನ್ನು ಕದ್ದುಮುಚ್ಚಿ ನೋಡುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ, ಹೊಸ ಆದಾಯ ತೆರಿಗೆ ಕಾಯ್ದೆ 2025ರ ಸೆಕ್ಷನ್ 247ರ ನಿಬಂಧನೆಗಳು ಕೇವಲ ‘ಶೋಧ ಮತ್ತು ಸಮೀಕ್ಷೆ’ (Search and Survey) ಕಾರ್ಯಾಚರಣೆಗಳಿಗೆ ಮಾತ್ರ ಸೀಮಿತವಾಗಿವೆ.
ಯಾರಿಗೆ ಅನ್ವಯವಾಗುತ್ತದೆ? :
ಯಾವುದೇ ತೆರಿಗೆದಾರರು ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿರುವ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಿದ್ದು, ಅವರ ಮೇಲೆ ಇಲಾಖೆಯು ಔಪಚಾರಿಕವಾಗಿ ಶೋಧ ಕಾರ್ಯಾಚರಣೆ (ಐಟಿ ದಾಳಿ) ನಡೆಸುವ ಸಂದರ್ಭದಲ್ಲಿ ಮಾತ್ರ ಈ ಅಧಿಕಾರವನ್ನು ಬಳಸಲಾಗುತ್ತದೆ. ಸಾಮಾನ್ಯ ಪರಿಶೀಲನೆಯ ಸಂದರ್ಭಗಳಲ್ಲಿ ಇಲಾಖೆಗೆ ತೆರಿಗೆದಾರರ ಖಾಸಗಿ ಡಿಜಿಟಲ್ ಸ್ಥಳಗಳನ್ನು ಪ್ರವೇಶಿಸುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಾಮಾನ್ಯ ಜನರಿಗೆ ಯಾವುದೇ ಆತಂಕ ಬೇಡ :
ಈ ಕ್ರಮಗಳನ್ನು ಕಪ್ಪುಹಣ (Black Money) ಮತ್ತು ಬೃಹತ್ ಪ್ರಮಾಣದ ತೆರಿಗೆ ವಂಚನೆಯನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆಯೇ ಹೊರತು, ನಿಯಮಬದ್ಧವಾಗಿ ತೆರಿಗೆ ಪಾವತಿಸುವ, ಕಾನೂನು ಪಾಲಿಸುವ ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಲು ಅಲ್ಲ. ದೈನಂದಿನ ಮಾಹಿತಿ ಸಂಗ್ರಹಣೆ ಅಥವಾ ಪ್ರಕ್ರಿಯೆಗಾಗಿ ಈ ಅಧಿಕಾರವನ್ನು ಬಳಸಲಾಗುವುದಿಲ್ಲ.
ಶೋಧ ಮತ್ತು ಸಮೀಕ್ಷೆ ಕಾರ್ಯಾಚರಣೆಯ ಸಮಯದಲ್ಲಿ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳುವ ಅಧಿಕಾರವು 1961ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಮೊದಲಿನಿಂದಲೂ ಅಸ್ತಿತ್ವದಲ್ಲಿದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಹೀಗಾಗಿ, ಏಪ್ರಿಲ್ 1, 2026ರ ಬಗ್ಗೆ ಹರಿದಾಡುತ್ತಿರುವ ಆತಂಕಕಾರಿ ಸಂದೇಶಗಳನ್ನು ನಿರ್ಲಕ್ಷಿಸುವಂತೆ ಕೋರಲಾಗಿದೆ.























