ಬೆಂಗಳೂರು, ಡಿ.21 www.bengaluruwire.com : ನ್ಯಾಕ್ (NAAC) ನಿಂದ ಎ ಪ್ಲಸ್ ಮಾನ್ಯತೆ ಪಡೆದಿರುವ ಪ್ರತಿಷ್ಠಿತ ಅಲಯನ್ಸ್ ವಿಶ್ವವಿದ್ಯಾಲಯವು ತನ್ನ 14ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿತು.
“ಕನಸುಗಳಿಗೆ ರೆಕ್ಕೆಗಳು” (When Dreams Take Wings) ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಸಮಾರಂಭದಲ್ಲಿ ಸುಮಾರು 2,000 ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಪ್ರಮುಖ ಮೈಲಿಗಲ್ಲನ್ನು ದಾಟಿ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದರು.
ಆನೇಕಲ್‌ನ ಕೇಂದ್ರ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಒಟ್ಟು 1,962 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಡಿಪ್ಲೊಮಾ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 960 ಪದವಿ, 887 ಸ್ನಾತಕೋತ್ತರ, 10 ಡಾಕ್ಟರೇಟ್, 20 ಪ್ರದರ್ಶನ ಕಲೆಗಳ ಡಿಪ್ಲೊಮಾ ಮತ್ತು 85 ಎಕ್ಸಿಕ್ಯೂಟಿವ್ ಪಿಜಿ ಡಿಪ್ಲೊಮಾ ವಿದ್ಯಾರ್ಥಿಗಳು ಸೇರಿದ್ದಾರೆ.

ಶಿಕ್ಷಣವೆಂದರೆ ಸಮಾಜಕ್ಕೆ ಹಸ್ತಾಂತರಿಸುವ ನಂಬಿಕೆ :

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅನನ್ಯಾ ಬ್ಯಾನರ್ಜಿ (ಬಂಡ್ಯೋಪಾಧ್ಯಾಯ) ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಶಿಕ್ಷಣದ ಉದ್ದೇಶವನ್ನು ಹೊಸ ದೃಷ್ಟಿಕೋನದಲ್ಲಿ ವಿವರಿಸಿದರು.
“ಪದವಿ ಪ್ರದಾನ ಸಮಾರಂಭವು ಒಂದು ಸಂಭ್ರಮ ಮಾತ್ರವಲ್ಲ, ಇದು ಒಂದು ಶಿಕ್ಷಣ ಸಂಸ್ಥೆಯು ತನ್ನ ಅತ್ಯಮೂಲ್ಯ ನಂಬಿಕೆಯಾದ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಹಸ್ತಾಂತರಿಸುವ ಪವಿತ್ರ ಕ್ಷಣವಾಗಿದೆ. ಇಂದು ನೀವು ಕೇವಲ ಪದವೀಧರರಾಗುತ್ತಿಲ್ಲ, ಬದಲಾಗಿ ಜ್ಞಾನ ಮತ್ತು ನೈತಿಕ ಹೊಣೆಗಾರಿಕೆಯ ಜವಾಬ್ದಾರಿಯನ್ನು ಹೊರುತ್ತಿದ್ದೀರಿ,” ಎಂದು ಅವರು ಕರೆ ನೀಡಿದರು. ಅಲ್ಲದೆ, ನಿಜವಾದ ಶಿಕ್ಷಣವು ಮನಸ್ಸನ್ನು ತರ್ಕಕ್ಕೆ ಮತ್ತು ಅಂತಃಕರಣವನ್ನು ಪ್ರತಿಕ್ರಿಯೆಗೆ ಸಿದ್ಧಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಗಣ್ಯರ ಉಪಸ್ಥಿತಿ ಮತ್ತು ಉದ್ಯಮ-ಶಿಕ್ಷಣದ ಬೆಸುಗೆ:
ಗೌರವ ಅತಿಥಿಗಳಾಗಿ ಐಐಎಂ ಬೆಂಗಳೂರಿನ ತಂತ್ರನೀತಿ ಪ್ರಾಧ್ಯಾಪಕ ಡಾ. ರಿಷಿಕೇಶ ಟಿ. ಕೃಷ್ಣನ್ ಮತ್ತು ಸೆಮಿ ಇಂಡಿಯಾ (SEMI India) ಅಧ್ಯಕ್ಷ ಹಾಗೂ ಟೆಸೋಲ್ವ್ ಸೆಮಿಕಂಡಕ್ಟರ್ ಸಹ-ಸ್ಥಾಪಕ ಡಾ. ವೀರಪ್ಪನ್ ವಿ. ಅವರು ಭಾಗವಹಿಸಿದ್ದರು. ಇವರ ಉಪಸ್ಥಿತಿಯು ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ರೂಪಿಸುವಲ್ಲಿನ ಮಹತ್ವಾಕಾಂಕ್ಷೆ ಮತ್ತು ಶೈಕ್ಷಣಿಕ ದೃಷ್ಟಿಕೋನಕ್ಕೆ ಸಾಕ್ಷಿಯಾಯಿತು.
ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು :
ಅಲೈಯನ್ಸ್ ಯೂನಿವರ್ಸಿಟಿ ರಿಸರ್ಚ್ & ಇನೋವೇಶನ್ ಸೆಂಟರ್ (AURIC) ಮೂಲಕ ವಿಶ್ವವಿದ್ಯಾಲಯವು ಜ್ಞಾನ ಸೃಷ್ಟಿಗೆ ಮತ್ತು ನಾವೀನ್ಯತೆಗೆ ನೀಡುತ್ತಿರುವ ಆದ್ಯತೆಯನ್ನು ಸಮಾರಂಭದಲ್ಲಿ ಎತ್ತಿ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಚಾನ್ಸಲರ್ ಪ್ರೊ.ಪ್ರೇಮಾನಂದ ಶೆಟ್ಟಿ, ಪ್ರೋ-ಚಾನ್ಸಲರ್ ಅಭಯ್ ಜಿ. ಚೆಬ್ಬಿ ಮತ್ತು ಉಪಕುಲಪತಿ ಡಾ. ಬಿ. ಪ್ರಿಸ್ಲಿ ಶಾನ್ ಉಪಸ್ಥಿತರಿದ್ದರು.






















