ಚೆಂಗ್ಡು (ಚೀನಾ) ಡಿ.20 www.bengaluruwire.com : ಸಾಮಾನ್ಯವಾಗಿ ಸಂಗೀತ ಕಚೇರಿಗಳಲ್ಲಿ ಹಿನ್ನೆಲೆ ನೃತ್ಯಗಾರರು (Background Dancers) ಹೆಜ್ಜೆ ಹಾಕುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಕಡೆ ಮನುಷ್ಯರನ್ನೇ ನಾಚಿಸುವಂತೆ ರೋಬೋಟ್‌ಗಳು ಲೀಲಾಜಾಲವಾಗಿ ಸ್ಟೆಪ್ಸ್ ಹಾಕುವ ಮೂಲಕ ಪ್ರೇಕ್ಷಕರ ಹುಬ್ಬೇರಿಸಿವೆ.
ಹೌದು, ಖ್ಯಾತ ಗಾಯಕ ವಾಂಗ್ ಲೀಹೋಮ್ ಅವರ ಸಂಗೀತ ಕಚೇರಿಯಲ್ಲಿ ರೋಬೋಟ್‌ಗಳು ನೀಡಿದ ಪ್ರದರ್ಶನ ಈಗ ಅಂತರ್ಜಾಲದಲ್ಲಿ ಧೂಳೆಬ್ಬಿಸುತ್ತಿದೆ.
ಚೀನಾದ ಚೆಂಗ್ಡು ನಗರದಲ್ಲಿ ನಡೆದ ‘ಬೆಸ್ಟ್ ಪ್ಲೇಸ್ ಟೂರ್’ (Best Place Tour) ಸಂಗೀತ ಕಾರ್ಯಕ್ರಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಚೀನೀ-ಅಮೇರಿಕನ್ ಗಾಯಕ ವಾಂಗ್ ಲೀಹೋಮ್ ಹಾಡುತ್ತಿದ್ದ “ಓಪನ್ ಫೈರ್” (Open Fire) ಹಾಡಿನ ಬೀಟ್‌ಗಳಿಗೆ ತಕ್ಕಂತೆ ‘ಯುನಿಟ್ರೀ ರೋಬೋಟ್‌ಗಳು’ (Unitree Robots) ಹೆಜ್ಜೆ ಹಾಕಿವೆ.
ಮನುಷ್ಯರಿಗಿಂತಲೂ ಚುರುಕು, ನಿಖರ:

ವೇದಿಕೆಯ ಮೇಲೆ ಲೈಟ್ ಗಳು ಬೆಳಗುತ್ತಿದ್ದಂತೆ ಪ್ರತ್ಯಕ್ಷವಾದ ಈ ರೋಬೋಟ್‌ಗಳು, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ವಾಂಗ್ ಲೀಹೋಮ್ ಅವರ ಕೊರಿಯೋಗ್ರಫಿಗೆ ಕರಾರುವಾಕ್ಕಾಗಿ ಸ್ಪಂದಿಸಿವೆ. ಕೇವಲ ಕೈಕಾಲು ಆಡಿಸುವುದಷ್ಟೇ ಅಲ್ಲ, ಸಂಗೀತದ ಲಯಕ್ಕೆ ತಕ್ಕಂತೆ ಲಾಗ (Backflips) ಹಾಕುವ ಮೂಲಕ ನೆರೆದಿದ್ದವರನ್ನು ಚಕಿತಗೊಳಿಸಿವೆ. ಅವುಗಳ ಚಲನವಲನಗಳಲ್ಲಿ ಯಾವುದೇ ಯಾಂತ್ರಿಕ ಬಿಗುಮಾನವಿರಲಿಲ್ಲ, ಬದಲಾಗಿ ವೃತ್ತಿಪರ ನೃತ್ಯಗಾರರಷ್ಟೇ ಸಲೀಸಾಗಿ ಅವು ಕುಣಿದಿವೆ ಎಂದು ಪ್ರತ್ಯಕ್ಷದರ್ಶಿಗಳು ಬಣ್ಣಿಸಿದ್ದಾರೆ.
ತಂತ್ರಜ್ಞಾನ ಮತ್ತು ಸಂಗೀತದ ಹದವಾದ ಮಿಶ್ರಣ :
ತಮ್ಮ ಸಂಗೀತ ಕಚೇರಿಗಳಲ್ಲಿ ಸದಾ ಹೊಸತನವನ್ನು ಬಯಸುವ ವಾಂಗ್ ಲೀಹೋಮ್, ಈ ಬಾರಿ ರೋಬೋಟಿಕ್ ಡ್ಯಾನ್ಸರ್ ಬಳಸಿಕೊಳ್ಳುವ ಮೂಲಕ ಲೈವ್ ಕಾನ್ಸರ್ಟ್ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಫ್ಯೂಚರಿಸ್ಟಿಕ್ ಲೈಟಿಂಗ್ ಹಾಗೂ ರೋಬೋಟ್‌ಗಳ ಶಾರ್ಪ್ ಮೂವ್‌ಮೆಂಟ್ಸ್ ಪ್ರೇಕ್ಷಕರಿಗೆ ದೃಶ್ಯಕಾವ್ಯದ ಅನುಭವ ನೀಡಿದೆ.
ರೊಬೋಟ್ ಗಳ ನೃತ್ಯಕ್ಕೆ ನೆಟ್ಟಿಗರು ಫಿದಾ:
ಈ ರೋಬೋಟಿಕ್ ನೃತ್ಯದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ‘ಎಕ್ಸ್’ (ಟ್ವಿಟರ್) ಸೇರಿದಂತೆ ಹಲವು ಕಡೆ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಗಳು, “ಇದು ನಿಜಕ್ಕೂ ನಂಬಲು ಅಸಾಧ್ಯ, ರೋಬೋಟ್‌ಗಳು ಮನುಷ್ಯರಿಗಿಂತಲೂ ಅದ್ಭುತವಾಗಿ ನೃತ್ಯ ಮಾಡುತ್ತಿವೆ,” ಎಂದು ಕೊಂಡಾಡಿದ್ದಾರೆ. ಒಟ್ಟಿನಲ್ಲಿ ಚೆಂಗ್ಡು ಸಂಗೀತ ಕಚೇರಿಯು ಕೇವಲ ಸಂಗೀತಕ್ಕಷ್ಟೇ ಅಲ್ಲದೆ, ತಂತ್ರಜ್ಞಾನದ ಅಬ್ಬರಕ್ಕೂ ಸಾಕ್ಷಿಯಾಗಿದೆ.























