ಬೆಂಗಳೂರು, ಡಿ.19 www.bengaluruwire.com : ಜನರ ಜೀವದ ಜೊತೆ ಚೆಲ್ಲಾಟವಾಡುವ ನಕಲಿ ಮತ್ತು ಕಳಪೆ ಔಷಧ ಮಾಫಿಯಾಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದಲ್ಲಿ ಇನ್ಮುಂದೆ ವಿಷಪೂರಿತ, ಅವಧಿ ಮೀರಿದ (ಡಿಕಂಪೋಸ್) ಅಥವಾ ಹಾನಿಕಾರಕ ಔಷಧಗಳನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಜಾಮೀನು ರಹಿತ (Non-Bailable) ಪ್ರಕರಣ ದಾಖಲಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ‘ಔಷಧ ಮತ್ತು ಪ್ರಸಾಧನ ಸಾಮಗ್ರಿ ತಿದ್ದುಪಡಿ ವಿಧೇಯಕ- 2025’ ರ ಕುರಿತು ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.
ನಕಲಿ ಜಾಲಕ್ಕೆ ಬೀಳಲಿದೆ ಬ್ರೇಕ್ :

ಈ ವಿಧೇಯಕದ ಪ್ರಮುಖ ಉದ್ದೇಶವೇ ರಾಜ್ಯದಲ್ಲಿ ತಲೆ ಎತ್ತುತ್ತಿರುವ ಕಳಪೆ ಮತ್ತು ನಕಲಿ ಔಷಧ ಜಾಲವನ್ನು ಮಟ್ಟಹಾಕುವುದು. “ಹಲವು ಸುತ್ತಿನ ಚರ್ಚೆಗಳ ನಂತರ ಈ ವಿಧೇಯಕವನ್ನು ರೂಪಿಸಿದ್ದೇವೆ. ಸರಿಯಾದ ಪೂರೈಕೆ ಸರಪಳಿ (Supply Chain) ಇಲ್ಲದಿದ್ದರೆ, ಕಲಬೆರಕೆ ಔಷಧಗಳು ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸುತ್ತವೆ. ಆದ್ದರಿಂದ, ಔಷಧ ಎಲ್ಲಿ ಉತ್ಪಾದನೆಯಾಗಿದೆ ಮತ್ತು ಎಲ್ಲಿಗೆ ಪೂರೈಕೆಯಾಗುತ್ತಿದೆ ಎಂಬ ನಿಖರ ಮಾಹಿತಿ ನೀಡುವುದನ್ನು ಈ ಕಾಯಿದೆ ಕಡ್ಡಾಯಗೊಳಿಸಲಿದೆ,” ಎಂದು ಸಚಿವರು ವಿವರಿಸಿದರು.
ಠಾಣೆಯಲ್ಲೇ ಜಾಮೀನು ಸಿಗಲ್ಲ :
ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಕಳಪೆ ಔಷಧ ಮಾರಾಟಗಾರರ ಮೇಲೆ ಕೇಸ್ ದಾಖಲಾದರೂ, ಸಾಕ್ಷ್ಯಾಧಾರಗಳ ಕೊರತೆಯ ನೆಪದಲ್ಲಿ ಪೊಲೀಸ್ ಠಾಣೆಯ ಹಂತದಲ್ಲೇ ಆರೋಪಿಗಳು ಸುಲಭವಾಗಿ ಜಾಮೀನು ಪಡೆಯುತ್ತಿದ್ದರು. ಆದರೆ, ನೂತನ ತಿದ್ದುಪಡಿಯ ಅನ್ವಯ, ಟಾಕ್ಸಿಕ್ ಅಥವಾ ವಿಷಪೂರಿತ ಔಷಧ ಮಾರಾಟ ಮಾಡುವುದು ಗಂಭೀರ ಅಪರಾಧವಾಗಿ ಪರಿಗಣಿಸಲ್ಪಡಲಿದ್ದು, ಇನ್ನು ಮುಂದೆ ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ರಾಜ್ಯದಲ್ಲೇ ಹೈಟೆಕ್ ಲ್ಯಾಬ್ ಸ್ಥಾಪನೆ :
ಔಷಧಗಳ ಗುಣಮಟ್ಟ ಪರೀಕ್ಷೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹಾಗೂ ಸಮಾಲೋಚನೆ ನಡೆಸಿ ರಾಜ್ಯದಲ್ಲೇ ಸುಸಜ್ಜಿತ ಪ್ರಯೋಗಾಲಯವನ್ನು (Central Drug Lab style) ಸ್ಥಾಪಿಸಲಾಗುವುದು. ಎಲ್ಲಾ ಔಷಧಗಳನ್ನು ಅಂತಿಮವಾಗಿ ಈ ಲ್ಯಾಬ್‌ನಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಆಯುಷ್ ಮತ್ತು ಯುನಾನಿಗೂ ಲೈಸೆನ್ಸ್ ಕಡ್ಡಾಯ :
ಕೇವಲ ಅಲೋಪತಿ ಮಾತ್ರವಲ್ಲದೆ, ಆಯುಷ್, ಯುನಾನಿ ಹಾಗೂ ಇತರ ಪರ್ಯಾಯ ವೈದ್ಯಕೀಯ ಪದ್ಧತಿಯ ಔಷಧಗಳಿಗೂ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗುವುದು. ಎಷ್ಟು ಪ್ರಮಾಣದ ಔಷಧ ತಯಾರಿಸಲಾಗಿದೆ ಮತ್ತು ಎಷ್ಟು ಮಾರಾಟವಾಗಿದೆ ಎಂಬ ಪಕ್ಕಾ ಲೆಕ್ಕಾಚಾರ ಸರ್ಕಾರಕ್ಕೆ ಸಿಗಬೇಕು. ಈ ನಿಟ್ಟಿನಲ್ಲಿ ಎಲ್ಲದಕ್ಕೂ ಕಡಿವಾಣ ಹಾಕಲು ಸರ್ಕಾರ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.






















