ಧಾರವಾಡ, ಡಿ.16 www.bengaluruwire.com : ರಾಜ್ಯದಲ್ಲಿ ‘ಋತುಚಕ್ರ ರಜೆ ನೀತಿ-2025’ (Menstrual Leave Policy) ಜಾರಿಗೆ ಬಂದಿದ್ದರೂ, ಹೋಟೆಲ್ ಮತ್ತು ಇತರೆ ಸಂಸ್ಥೆಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಸೋಮವಾರ (ಡಿ.15) ವಿಚಾರಣೆ ನಡೆಸಿತು.
ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಈ ಕುರಿತು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹೋಟೆಲ್ ಕಾರ್ಮಿಕ ಮಹಿಳೆ ಚಂದ್ರವ್ವ ಅವರು ಈ ಸಂಬಂಧ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರವು ಋತುಚಕ್ರ ರಜೆ ನೀತಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿದ್ದರೂ, ಹೋಟೆಲ್ ಉದ್ಯಮ ಸೇರಿದಂತೆ ಅಸಂಘಟಿತ ವಲಯಗಳಲ್ಲಿ ಇದು ಇನ್ನೂ ಜಾರಿಯಾಗಿಲ್ಲ ಎಂಬ ಗಂಭೀರ ವಿಷಯವನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅರ್ಜಿದಾರರ ಪರ ವಾದವೇನು? :

ಅರ್ಜಿದಾರರ ಪರವಾಗಿ ವಕೀಲೆ ದೀಕ್ಷಾ ಎನ್. ಅಮೃತೇಶ್ ಅವರು ವಾದ ಮಂಡಿಸಿ, “ದಿನಗೂಲಿ ಆಧಾರದ ಮೇಲೆ ದುಡಿಯುವ ಮಹಿಳಾ ಕಾರ್ಮಿಕರು ಋತುಚಕ್ರದ ಸಮಯದಲ್ಲಿಯೂ ಅಸುರಕ್ಷಿತ ಮತ್ತು ಅನೈರ್ಮಲ್ಯದ ವಾತಾವರಣದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಒಂದು ವೇಳೆ ರಜೆ ತೆಗೆದುಕೊಂಡರೆ ವೇತನ ಕಡಿತಗೊಳ್ಳಲಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಸರ್ಕಾರದ ನೀತಿ ಜಾರಿಯಾಗದ ಕಾರಣ ಬಡ ಮಹಿಳಾ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ,” ಎಂದು ಅವರು ಪೀಠದ ಗಮನಕ್ಕೆ ತಂದರು.
ಮುಂದಿನ ವಿಚಾರಣೆ ಜನವರಿಗೆ ಮುಂದೂಡಿಕೆ:
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಸರ್ಕಾರದ ವೈಫಲ್ಯದ ಬಗ್ಗೆ ವಿವರಣೆ ಕೋರಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಜನವರಿ 5ಕ್ಕೆ ನಿಗದಿಪಡಿಸಲಾಗಿದೆ.
ಈ ಬೆಳವಣಿಗೆಯು ರಾಜ್ಯದ ಅಸಂಘಟಿತ ವಲಯದ ಲಕ್ಷಾಂತರ ಮಹಿಳಾ ಕಾರ್ಮಿಕರಲ್ಲಿ ಹೊಸ ಭರವಸೆ ಮೂಡಿಸಿದ್ದು, ಹೈಕೋರ್ಟ್‌ನ ಮುಂದಿನ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದೆ.























