ಬೆಂಗಳೂರು, ಡಿ.13 www.bengaluruwire.com : ನಗರದಲ್ಲಿ ಸುಗಮ ಸಂಚಾರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರಮುಖ ಹೆಜ್ಜೆ ಇಟ್ಟಿದ್ದು, ನಗರದಾದ್ಯಂತ ಒಟ್ಟು 300 ಕಿ.ಮೀ ಉದ್ದದ ಬಫರ್ ರಸ್ತೆಗಳನ್ನು (Buffer Roads) ನಿರ್ಮಿಸಲು ಯೋಜಿಸಿದೆ.
ಇದರ ಮೊದಲ ಹಂತವಾಗಿ, ಸಂಚಾರ ಯುಕ್ತ ಯೋಜನೆಯಡಿ ಆಯ್ಕೆ ಮಾಡಲಾದ 47 ಕಿ.ಮೀ ಉದ್ದದ ರಸ್ತೆ ಕಾಮಗಾರಿಯನ್ನು ಈ ತಿಂಗಳಾಂತ್ಯದೊಳಗೆ ಕಡ್ಡಾಯವಾಗಿ ಪ್ರಾರಂಭಿಸುವಂತೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ನಗರದಲ್ಲಿ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ಕಾಮಗಾರಿಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಪ್ರಮುಖ ರಸ್ತೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ನೆರೆಹೊರೆಯ ರಸ್ತೆಗಳನ್ನು ಬಲಪಡಿಸಲು ಬಫರ್ ವಲಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ.
ಇದಕ್ಕಾಗಿ 300 ಕಿ.ಮೀ ಬಫರ್ ರಸ್ತೆ ನಿರ್ಮಾಣದ ಗುರಿ ಹೊಂದಲಾಗಿದ್ದು, ತಕ್ಷಣಕ್ಕೆ 47 ಕಿ.ಮೀ ರಸ್ತೆಗಳ ಸಿದ್ಧತೆ ಪೂರ್ಣಗೊಂಡಿದೆ. ಗುತ್ತಿಗೆದಾರರಿಗೆ ತಕ್ಷಣ ಕಾರ್ಯಾದೇಶ ನೀಡಿ ಕೆಲಸ ಶುರು ಮಾಡಿ ಎಂದು ನಿರ್ದೇಶಿಸಿದರು.

ಖಾಸಗಿ ಜಾಗಕ್ಕೆ ಟಿಡಿಆರ್ ಪರಿಹಾರ:
ಬಫರ್ ರಸ್ತೆ ನಿರ್ಮಾಣಕ್ಕೆ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಮತ್ತು ಸ್ವತ್ತುಗಳ ಸರ್ವೇ ಕಾರ್ಯ ನಡೆಯಬೇಕು. ವಿನ್ಯಾಸ ಪರಿಶೀಲನೆ ನಂತರ, ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಖಾಸಗಿ ಜಾಗಗಳ ಅವಶ್ಯಕತೆಯಿದ್ದರೆ, ಮಾಲೀಕರಿಗೆ ಟಿಡಿಆರ್ (TDR) ಅಥವಾ ಪ್ರೀಮಿಯಂ ಎಫ್.ಎ.ಆರ್ ನೀಡುವ ಮೂಲಕ ಜಾಗವನ್ನು ವಶಕ್ಕೆ ಪಡೆದು ಕಾಮಗಾರಿ ಕೈಗೊಳ್ಳಲು ಆಯುಕ್ತರು ಸಲಹೆ ನೀಡಿದರು.
ಈಗಾಗಲೇ ಈಜೀಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಹೊರವರ್ತುಲ ರಸ್ತೆಯವರೆಗೆ 2.6 ಕಿ.ಮೀ ಉದ್ದದ ಬಫರ್ ರಸ್ತೆ ಕಾಮಗಾರಿ ರಕ್ಷಣಾ ಇಲಾಖೆ ಜಾಗದ ಬಳಿ 44 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದೆ ಎಂದು ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕ ಪ್ರಹ್ಲಾದ್ ಮಾಹಿತಿ ನೀಡಿದರು.
ಹೆದ್ದಾರಿ ಮೇಲೆ ತ್ಯಾಜ್ಯ: ಕ್ರಮಕ್ಕೆ ಸೂಚನೆ :
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ಹೆಬ್ಬಾಳದಿಂದ ಯಲಹಂಕದವರೆಗಿನ ರಸ್ತೆಯಲ್ಲಿ ಕಸದ ರಾಶಿ, ಭಗ್ನಾವಶೇಷಗಳ ಗುಡ್ಡ ಮತ್ತು ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ತಕ್ಷಣವೇ ರಸ್ತೆ ಸ್ವಚ್ಛಗೊಳಿಸಬೇಕು ಮತ್ತು ಜಲಮಂಡಳಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಒಳಚರಂಡಿ ನೀರು ರಸ್ತೆಗೆ ಬಾರದಂತೆ ತಡೆಯಬೇಕು ಎಂದು ತಾಕೀತು ಮಾಡಿದರು.
ಇತರೆ ಮುಖ್ಯಾಂಶಗಳು:
* ಲೇನ್ ಮಾರ್ಕಿಂಗ್: ನಗರದಲ್ಲಿ ಹೊಸದಾಗಿ ಡಾಂಬರೀಕರಣಗೊಂಡ ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್, ಜೀಬ್ರಾ ಕ್ರಾಸಿಂಗ್ ಮತ್ತು ಕ್ಯಾಟ್ ಐಸ್ ಅಳವಡಿಕೆ ತ್ವರಿತವಾಗಿ ಆಗಬೇಕು.
* ಪ್ರವಾಹ ತಡೆ: ಮಳೆಗಾಲಕ್ಕೂ ಮುನ್ನವೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ರಾಜಕಾಲುವೆ ಸೆನ್ಸಾರ್‌ಗಳನ್ನು ಪರಿಶೀಲಿಸಬೇಕು.
* ಮೆಟ್ರೋ ಪಾರ್ಕಿಂಗ್: ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ತಪ್ಪಿಸಲು ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕುರಿತು ಸ್ಟೇಷನ್‌ವಾರು ಪಟ್ಟಿ ನೀಡಲು ಸೂಚನೆ.
* ಮರ ಗಣತಿ: 2026ರ ಮಾರ್ಚ್ ಅಂತ್ಯದೊಳಗೆ ಮರ ಗಣತಿ ಕಾರ್ಯವನ್ನು ಪೂರ್ಣಗೊಳಿಸಬೇಕು.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರುಗಳಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಬೆಸ್ಕಾಂ, ಬಿಡಿಎ, ಜಲಮಂಡಳಿ ಮತ್ತು ಮೆಟ್ರೋ ಅಧಿಕಾರಿಗಳು ಉಪಸ್ಥಿತರಿದ್ದರು.






















