ಬೆಳಗಾವಿ (ಸುವರ್ಣಸೌಧ) ಡಿ.10 www.bengaluruwire.com : ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಲು ನಡೆಸಬೇಕಾದ ಭೂ ಪರಿವರ್ತನೆ (Land Conversion) ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಣ್ಣ ಕೈಗಾರಿಕೆಗಳು ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಮಹತ್ವದ ವಿನಾಯಿತಿಗಳನ್ನು ಘೋಷಿಸಿದೆ.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಸದಸ್ಯ ರಾಮೋಜಿ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರಿಸಿದರು. ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95ರ ವಿವಿಧ ಉಪ-ಕಲಂಗಳಿಗೆ ತಿದ್ದುಪಡಿ ತರಲಾಗಿದ್ದು, ಈ ಸಂಬಂಧ ಕರಡು ನಿಯಮಗಳನ್ನು ಈಗಾಗಲೇ ಪ್ರಕಟಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.
ಸಣ್ಣ ಕೈಗಾರಿಕೆಗಳಿಗೆ ಬಂಪರ್ ಕೊಡುಗೆ :
ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ (MSME) ಉತ್ತೇಜನ ನೀಡುವ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. “ಇನ್ನು ಮುಂದೆ 2 ಎಕರೆವರೆಗಿನ ಕೃಷಿ ಜಮೀನಿನಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರತ್ಯೇಕವಾಗಿ ‘ಭೂ ಪರಿವರ್ತನೆ’ ಮಾಡಿಸುವ ಅಗತ್ಯವಿರುವುದಿಲ್ಲ. ಬದಲಿಗೆ ನೇರವಾಗಿ ಸಂಬಂಧಪಟ್ಟ ಇಲಾಖೆಯಿಂದ ನಕ್ಷೆ ಅನುಮೋದನೆ (Plan Approval) ಪಡೆದುಕೊಂಡು ಕಾಮಗಾರಿ ಆರಂಭಿಸಬಹುದಾಗಿದೆ,” ಎಂದು ಸಚಿವರು ಸ್ಪಷ್ಟಪಡಿಸಿದರು.

ಅಲ್ಲದೆ, ನವೀಕರಿಸಬಹುದಾದ ಇಂಧನ ಯೋಜನೆಗಳಿಗೂ (Renewable Energy Projects) ಇನ್ನು ಮುಂದೆ ಭೂ ಪರಿವರ್ತನೆಯ ಅವಶ್ಯಕತೆ ಇರುವುದಿಲ್ಲ. ಈ ಕ್ರಮದಿಂದ ಉದ್ಯಮ ಸ್ಥಾಪನೆಗೆ ಇದ್ದ ಕೆಂಪು ಪಟ್ಟಿಯ ಅಡೆತಡೆಗಳು ನಿವಾರಣೆಯಾಗಲಿದ್ದು, ತ್ವರಿತವಾಗಿ ಯೋಜನೆಗಳನ್ನು ಜಾರಿಗೊಳಿಸಲು ಸಹಕಾರಿಯಾಗಲಿದೆ.
ಶೀಘ್ರದಲ್ಲೇ ಅಂತಿಮ ಅಧಿಸೂಚನೆ :
ಭೂ ಪರಿವರ್ತನೆ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದೆ. ಈ ತಿದ್ದುಪಡಿಗಳನ್ನು ಜಾರಿಗೆ ತರಲು ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಸಲಹೆಗಳನ್ನು ಪಡೆಯಲಾಗಿದೆ. ಈ ಸಂಬಂಧ 2025ರ ಸೆಪ್ಟೆಂಬರ್ 17ರಂದೇ ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದ್ಯದಲ್ಲೇ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಜೊತೆಗೆ, ಕಂದಾಯ ನ್ಯಾಯಾಲಯಗಳನ್ನು ನಡೆಸುವ ಕುರಿತಂತೆಯೂ ಸೂಕ್ತ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.






















