ಬೆಳಗಾವಿ (ಸುವರ್ಣ ವಿಧಾನಸೌಧ) ಡಿ.10 www.bengaluruwire.com : ರಾಜ್ಯದ ಅತಿ ಗಣ್ಯ ವ್ಯಕ್ತಿಗಳ (VVIP) ತುರ್ತು ಪ್ರಯಾಣ ಹಾಗೂ ವಿಶೇಷ ಸಂದರ್ಭಗಳಿಗಾಗಿ ಹೊಸದಾಗಿ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನವನ್ನು ಖರೀದಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಈಗ ಕೈಬಿಟ್ಟಿದೆ. ಬದಲಿಗೆ, ಅತ್ಯುತ್ತಮ ಗುಣಮಟ್ಟದ ವಿಮಾನಯಾನ ಸೇವೆಯನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ನಡೆದ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನ ಸೇವೆ ಸಂಬಂಧಿತ ಸಂಪುಟ ಉಪಸಮಿತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಖರೀದಿ ಇಲ್ಲ, ಬಾಡಿಗೆ ಮಾತ್ರ:
“ರಾಜ್ಯದ ಗಣ್ಯರ ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನಗಳ ಅವಶ್ಯಕತೆಯಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇವುಗಳನ್ನು ನೇರವಾಗಿ ಖರೀದಿ ಮಾಡುವ ಬದಲು, ಬಾಡಿಗೆ ಆಧಾರದ ಮೇಲೆ ಪಡೆಯಲು ನಿರ್ಧರಿಸಲಾಗಿದೆ. ಗಂಟೆಗಳ ಲೆಕ್ಕದಲ್ಲಿ ಈ ಸೇವೆಯನ್ನು ಪಡೆಯಲಿದ್ದು, ಇದರಿಂದ ಸರ್ಕಾರದ ಬೊಕ್ಕಸದ ಹಣವೂ ಉಳಿತಾಯವಾಗಲಿದೆ ಹಾಗೂ ನಿರ್ವಹಣೆಯ ಹೊರೆಯೂ ಇರುವುದಿಲ್ಲ,” ಎಂದು ಡಿಸಿಎಂ ಹೇಳಿದರು.

ಹೆಚ್‌ಎಎಲ್ ಸೇವೆಯಲ್ಲಿ ವಿಳಂಬ:
ಈ ಹಿಂದೆ ಹೆಲಿಕಾಪ್ಟರ್ ಸೇವೆ ಒದಗಿಸುವಂತೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (HAL) ಮನವಿ ಮಾಡಲಾಗಿತ್ತು. ಏರ್ ಶೋ ಸಂದರ್ಭದಲ್ಲಿ ತಾವು ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ವೀಕ್ಷಿಸಿದ್ದ ಹೆಲಿಕಾಪ್ಟರ್ ಉತ್ತಮವಾಗಿತ್ತು. ಆದರೆ, ಹೆಚ್‌ಎಎಲ್ ಈ ಸೇವೆಯನ್ನು ಒದಗಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮತ್ತು ವಿಳಂಬವಾಗುವ ಕಾರಣ, ಅವರೇ ಶಿಫಾರಸು ಮಾಡಿದ ಬೇರೆ ಸಂಸ್ಥೆಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ಸುರಕ್ಷತೆಗೆ ಮೊದಲ ಆದ್ಯತೆ:
ಈ ಸೇವೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಹಲವು ಕಂಪನಿಗಳು ಆಸಕ್ತಿ ತೋರಿವೆ. ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಮತ್ತು ಬೈರತಿ ಸುರೇಶ್ ಅವರನ್ನೊಳಗೊಂಡ ಸಂಪುಟ ಉಪಸಮಿತಿಯು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದೆ.
“ಬೇರೆ ರಾಜ್ಯ ಸರ್ಕಾರಗಳಿಗೆ ಉತ್ತಮ ಸೇವೆ ನೀಡಿದ ಅನುಭವವಿರುವ ಹಾಗೂ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ಸಂಸ್ಥೆಗಳನ್ನು ಮಾತ್ರ ಪರಿಗಣಿಸಲಾಗುವುದು. ನಮಗೆ ಗಣ್ಯರ ಸುರಕ್ಷತೆ ಮತ್ತು ಸರ್ಕಾರದ ಹಣಕಾಸಿನ ಮಿತವ್ಯಯ ಎರಡೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಸೋಮವಾರ ಅಥವಾ ಮಂಗಳವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಸಭೆಯಲ್ಲಿ ಸಚಿವರು ತಮ್ಮ ಅನುಭವಗಳ ಆಧಾರದ ಮೇಲೆ ಸಲಹೆಗಳನ್ನು ನೀಡಿದ್ದು, ಅಂತಿಮವಾಗಿ ಖರೀದಿ ಪ್ರಕ್ರಿಯೆಯನ್ನು ಕೈಬಿಟ್ಟು, ಬಾಡಿಗೆ ಸೇವೆಯತ್ತ ಸರ್ಕಾರ ಮುಖಮಾಡಿದೆ. (Representative Image Credit : Private jet chapter)






















