ಬೆಳಗಾವಿ (ಸುವರ್ಣ ವಿಧಾನಸೌಧ) ಡಿ.10 www.bengaluruwire.com : ರಾಜ್ಯದಲ್ಲಿ 37,48,700 ವಸತಿ ರಹಿತರು ಇದ್ದಾರೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜಡ್. ಜಮೀರ್ ಅಹಮದ್ ಖಾನ್ ತಿಳಿಸಿದರು.
ಅವರು ವಿಧಾನ ಪರಿಷತ್‍ನಲ್ಲಿ ಸದಸ್ಯ ಶಿವಕುಮಾರ್ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2018ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಸತಿ/ನಿವೇಶನ ರಹಿತರ ಸಮೀಕ್ಷೆ ಹಾಗೂ 2017ರಲ್ಲಿ ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ ನಗರ ಪ್ರದೇಶದಲ್ಲಿ ವಸತಿ/ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಈ ಸಮೀಕ್ಷೆ ಯಲ್ಲಿ ರಾಜ್ಯದಲ್ಲಿ ಒಟ್ಟು 37,48,766 ವಸತಿ ರಹಿತರು ಕಂಡು ಬಂದಿದ್ದು, ಇದರಲ್ಲಿ 17,31,633 ನಿವೇಶನ ರಹಿತರು ಮತ್ತು 20,17,133 ವಸತಿ ರಹಿತರು ಇದ್ದಾರೆ ಎಂದರು.
2024-2025ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು 7,38,881 ಮನೆಗಳ ಗುರಿ ನೀಡಿದ್ದು, ಇವುಗಳಲ್ಲಿ 3,27,747 ಅನುಮೋದನೆಗೊಂಡಿರುತ್ತವೆ. 41,1134 ಮನೆಗಳು ಅನುಮೋದನೆಗೆ ಬಾಕಿಯಿವೆ ಎಂದರು.
ರಾಜ್ಯದಲ್ಲಿ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದವರಿಗೆ ರೂ. 4 ಲಕ್ಷ ಮತ್ತು ಸಾಮಾನ್ಯ ವರ್ಗದವರಿಗೆ ರೂ. 3.5 ಲಕ್ಷ ಕ್ಕೆ ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು. (Image Credit : Gemini AI)























