ನವದೆಹಲಿ, ಡಿ.08 www.bengaluruwire.com : ಡಿಜಿಟಲ್ ಯುಗದಲ್ಲಿ ಉದ್ಯೋಗಿಗಳನ್ನು ಕಾಡುತ್ತಿರುವ ‘ಟೆಲಿಪ್ರೆಶರ್’ ಮತ್ತು ಮಾನಸಿಕ ಒತ್ತಡಕ್ಕೆ ಕಡಿವಾಣ ಹಾಕಲು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಲೋಕಸಭೆಯಲ್ಲಿ ‘ಸಂಪರ್ಕ ಕಡಿತಗೊಳಿಸುವ ಹಕ್ಕು-2025’ (Right to Disconnect Bill-2025) ಎಂಬ ಮಹತ್ವದ ಖಾಸಗಿ ವಿಧೇಯಕವನ್ನು ಮಂಡಿಸಿದ್ದಾರೆ.
ಈ ಮಸೂದೆಯು ಕಚೇರಿ ಸಮಯದ ನಂತರ ಅಥವಾ ರಜಾ ದಿನಗಳಲ್ಲಿ ಬರುವ ಕಚೇರಿಯ ಕರೆಗಳು, ಇಮೇಲ್‌ಗಳು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸದಿರುವ ಹಕ್ಕನ್ನು ನೌಕರರಿಗೆ ನೀಡುವ ಗುರಿಯನ್ನು ಹೊಂದಿದೆ.
ವಿಧೇಯಕದ ಪ್ರಮುಖ ಮುಖ್ಯಾಂಶಗಳು:
‘ಕೆಲಸದ ಅವಧಿ ನಂತರ” ಕರೆಗಳಿಗೆ “ಆಗುವುದಿಲ್ಲ” ಎನ್ನಬಹುದು:

ವಿಧೇಯಕದ ಪ್ರಕಾರ, ನಿಗದಿತ ಕೆಲಸದ ಅವಧಿ ಮುಗಿದ ನಂತರ ನೌಕರರು ತಮ್ಮ ಬಾಸ್ ಅಥವಾ ಕಚೇರಿಯ ಯಾವುದೇ ಕರೆ, ಇಮೇಲ್ ಅಥವಾ ಮೆಸೇಜ್‌ಗಳಿಗೆ ಉತ್ತರಿಸುವ ಕಡ್ಡಾಯವಿರುವುದಿಲ್ಲ. ಹೀಗೆ ಉತ್ತರಿಸದಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತಿಲ್ಲ ಎಂದು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಕಂಪನಿಗೆ ದಂಡ:
ಒಂದು ವೇಳೆ ಕಂಪನಿಗಳು ಈ ನಿಯಮವನ್ನು ಮೀರಿ ನೌಕರರಿಗೆ ಕಿರುಕುಳ ನೀಡಿದರೆ, ಕಂಪನಿಯ ಒಟ್ಟು ನೌಕರರ ವೇತನದ ಶೇ.1 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸುವ ಪ್ರಸ್ತಾಪವಿದೆ. 10 ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕೆಲಸದ ಅವಧಿಯ ನಂತರದ ನಿಯಮಗಳ ಬಗ್ಗೆ ನೌಕರರೊಂದಿಗೆ ಅಥವಾ ಯೂನಿಯನ್ ಜೊತೆ ಕಡ್ಡಾಯವಾಗಿ ಮಾತುಕತೆ ನಡೆಸಬೇಕಾಗುತ್ತದೆ.
ಅಧಿಕ ಕೆಲಸಕ್ಕೆ ಓವರ್‌ಟೈಮ್ ವೇತನ:
ಒಂದು ವೇಳೆ ಉದ್ಯೋಗಿ ಸ್ವಇಚ್ಛೆಯಿಂದ ನಿಗದಿತ ಸಮಯದ ನಂತರವೂ ಕೆಲಸ ಮಾಡಲು ಒಪ್ಪಿದರೆ, ಅವರಿಗೆ ಅದಕ್ಕೆ ತಕ್ಕಂತೆ ಓವರ್‌ಟೈಮ್ (ಹೆಚ್ಚುವರಿ ಸಮಯದ) ವೇತನವನ್ನು ನೀಡಲೇಬೇಕಾಗುತ್ತದೆ. ಡಿಜಿಟಲ್ ಸಂಪರ್ಕದ ಹೆಸರಿನಲ್ಲಿ ನಡೆಯುವ ವೇತನರಹಿತ ದುಡಿಮೆಗೆ ಇದು ಬ್ರೇಕ್ ಹಾಕಲಿದೆ.
ನೌಕರರ ಕಲ್ಯಾಣ ಪ್ರಾಧಿಕಾರ ಸ್ಥಾಪನೆ:
ಈ ಕಾಯ್ದೆಯ ಅನುಷ್ಠಾನ ಮತ್ತು ಉಸ್ತುವಾರಿಗಾಗಿ ‘ನೌಕರರ ಕಲ್ಯಾಣ ಪ್ರಾಧಿಕಾರ’ (Employees’ Welfare Authority) ಸ್ಥಾಪಿಸಲು ಮಸೂದೆ ಸೂಚಿಸಿದೆ. ಡಿಜಿಟಲ್ ಡಿಟಾಕ್ಸ್ ಕೇಂದ್ರಗಳನ್ನು ತೆರೆಯುವುದು ಮತ್ತು ಅತಿಯಾದ ಗ್ಯಾಜೆಟ್ ಬಳಕೆಯ ಬಗ್ಗೆ ಕೌನ್ಸೆಲಿಂಗ್ ನೀಡುವುದು ಇದರ ಉದ್ದೇಶವಾಗಿದೆ.
ಈ ಖಾಸಗಿ ವಿಧೇಯಕ ಮಂಡಿಸಲು ಕಾರಣವೇನು? :
ಸುಪ್ರಿಯಾ ಸುಳೆ ಅವರು ಈ ಮಸೂದೆಯನ್ನು ಮಂಡಿಸುವಾಗ ‘ಇನ್ಫೋ-ಒಬೆಸಿಟಿ’ (ಮಾಹಿತಿ ಅಜೀರ್ಣ) ಮತ್ತು ನಿದ್ರಾಹೀನತೆಯಂತಹ ಗಂಭೀರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ಸದಾ ಆನ್‌ಲೈನ್‌ನಲ್ಲಿರಬೇಕೆಂಬ ಒತ್ತಡವು ನೌಕರರ ಕೌಟುಂಬಿಕ ನೆಮ್ಮದಿ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸದಸ್ಯರ ಮಸೂದೆಗಳು ಕಾನೂನಾಗಿ ಬದಲಾಗುವುದು ಅಪರೂಪವಾದರೂ, ಭಾರತದ ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳ ‘ವರ್ಕ್-ಲೈಫ್ ಬ್ಯಾಲೆನ್ಸ್’ (Work-Life Balance) ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕುವಲ್ಲಿ ಲೋಕಸಭಾ ಸದಸ್ಯೆಯ ಈ ನಡೆ ಯಶಸ್ವಿಯಾಗಿದೆ.























