ಬೆಂಗಳೂರು, ಡಿ.07 www.bengaluruwire.com : ಮೆಕ್ಕೆಜೋಳ ಬೆಳೆಗಾರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಪ್ರತಿ ರೈತರಿಂದ ಖರೀದಿಸುವ ಮೆಕ್ಕೆಜೋಳದ ಗರಿಷ್ಠ ಮಿತಿಯನ್ನು 20 ಕ್ವಿಂಟಾಲ್‌ನಿಂದ 50 ಕ್ವಿಂಟಾಲ್‌ಗೆ ಏರಿಕೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾದ ಈ ನಿರ್ಧಾರವು, ಮಾರುಕಟ್ಟೆಯ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಆರ್ಥಿಕ ಚೈತನ್ಯ ನೀಡಿದೆ. ಡಿಸೆಂಬರ್ 02 ರಂದು ಹೊರಡಿಸಲಾದ ಪರಿಷ್ಕೃತ ಆದೇಶದನ್ವಯ, ಇನ್ಮುಂದೆ ರೈತರು ತಮ್ಮ ಹೆಚ್ಚಿನ ಫಸಲನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಬಹುದಾಗಿದೆ.
ವೈಜ್ಞಾನಿಕ ಮಾನದಂಡ ಮತ್ತು ಬೆಲೆ ನಿಗದಿ :
ಸರ್ಕಾರದ ಹಿಂದಿನ ಆದೇಶದಂತೆ ಪ್ರತಿ ಎಕರೆಗೆ 12 ಕ್ವಿಂಟಾಲ್ ಇಳುವರಿ ಎಂದು ಪರಿಗಣಿಸಿ, ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಮೆಕ್ಕೆಜೋಳವನ್ನು ಮಾತ್ರ ಪ್ರತಿ ಕ್ವಿಂಟಾಲ್‌ಗೆ ₹2400 ರಂತೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಅವಕಾಶವಿತ್ತು. ಆದರೆ, ವಾಸ್ತವದಲ್ಲಿ ರೈತರ ಇಳುವರಿ ಹೆಚ್ಚಿರುವುದರಿಂದ ಮತ್ತು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು, ಈ ಗರಿಷ್ಠ ಮಿತಿಯನ್ನು ಈಗ 50 ಕ್ವಿಂಟಾಲ್‌ಗೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ನೇರ ಲಾಭವಾಗಲಿದೆ.

ಖರೀದಿ ಪ್ರಕ್ರಿಯೆ ಹೇಗೆ? :
ಈ ಯೋಜನೆಯು ಸಂಪೂರ್ಣ ಪಾರದರ್ಶಕವಾಗಿದ್ದು, ‘ಫ್ರೂಟ್ಸ್’ (FRUITS) ತಂತ್ರಾಂಶದಲ್ಲಿ ನೋಂದಾಯಿತವಾಗಿರುವ ರೈತರ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಖರೀದಿಯ ಮಿತಿಯನ್ನು ಲೆಕ್ಕಹಾಕಲಾಗುತ್ತದೆ.
ಆದ್ಯತೆ: ಡಿಸ್ಟಿಲರಿಗಳ (Distilleries) ಸಮೀಪವಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಮೂಲಕ ಖರೀದಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಪರಿಷ್ಕೃತ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ರಾಜ್ಯದ ಎಲ್ಲ ಪ್ಯಾಕ್ಸ್ (PACS), ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಧಾರಣೆ ಸ್ಥಿರಗೊಳ್ಳುವ ನಿರೀಕ್ಷೆಯಿದ್ದು, ರೈತ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.






















