ಉಡುಪಿ, ಡಿ.06 www.bengaluruwire.com: ಇಲ್ಲಿನ ಶ್ರೀ ಕೃಷ್ಣ ಮಠದ ಗೀತಾ ಮಂದಿರದಲ್ಲಿರುವ ಪುತ್ತಿಗೆ ನರಸಿಂಹ ಸಭಾಭವನದಲ್ಲಿ ಶನಿವಾರ ನಡೆದ ‘ಕರಾವಳಿ ವಿಕಾಸ ಸಂಭ್ರಮ-2025’ ಕಾರ್ಯಕ್ರಮದಲ್ಲಿ, ಕನ್ನಡ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ‘ಬೆಂಗಳೂರು ವೈರ್’ (Bengaluru Wire) ಸಂಪಾದಕರಾದ ಶ್ಯಾಮ್ ಎಸ್. ಅವರಿಗೆ ಪ್ರತಿಷ್ಠಿತ “ಕೊಡೆತ್ತಾರು ಅನಂತಪದ್ಮನಾಭ ಉಡುಪ ಸ್ಮರಣಾರ್ಥ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆಯಾದ ‘ವಿಕಾಸ’ ಹಾಗೂ ಉಡುಪಿ ಪುತ್ತಿಗೆ ಮಠದ ಆಧ್ಯಾತ್ಮಿಕ ಮಾಸ ಪತ್ರಿಕೆ ‘ಸುಗುಣ ಮಾಲಾ’ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಕಾಸ ಸಂಸ್ಥೆಯ ಅಧ್ಯಕ್ಷ ಶ್ರೀನಾಥ್ ಜೋಶಿ ಹಾಗೂ ಪ್ರಧಾನ ಕಾರ್ಯದರ್ಶಿ ಹನುಮೇಶ್ ಯಾವಗಲ್ ಅವರ ಉಪಸ್ಥಿತಿಯಲ್ಲಿ ಶ್ಯಾಮ್ ಎಸ್. ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ವಿಪ್ರರ ಸಂಘಟನೆ ಅತ್ಯಗತ್ಯ: ಪುತ್ತಿಗೆ ಶ್ರೀ

ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, “ವಿಪ್ರರ ಕುರಿತಾದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ವಿಪ್ರ ಪತ್ರಕರ್ತರು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಬ್ರಾಹ್ಮಣರೆಲ್ಲರೂ ಸಂಘಟನಾತ್ಮಕವಾಗಿ ಒಂದಾಗುವ ಮೂಲಕ ಸಮಾಜದಲ್ಲಿನ ತಪ್ಪು ಗ್ರಹಿಕೆಗಳನ್ನು ನಿವಾರಿಸಲು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ವಿಕಾಸ ಸಂಸ್ಥೆಯು ಕರಾವಳಿ ವಿಕಾಸ ಸಂಭ್ರಮದ ಮೂಲಕ ಯಶಸ್ವಿ ಹೆಜ್ಜೆ ಇಟ್ಟಿದೆ,” ಎಂದು ಶ್ಲಾಘಿಸಿದರು.

ಸಾಮಾಜಿಕ ಜಾಲತಾಣದ ಸವಾಲುಗಳು :
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, “ಸಮಾಜದಲ್ಲಿನ ವಿಕೃತಿಗಳನ್ನು ಬ್ರಾಹ್ಮಣರಿಗೆ ಕಟ್ಟುವ ಪಿತೂರಿ ನಡೆಯುತ್ತಿರುವುದು ದುರದೃಷ್ಟಕರ. ಸಾಮಾಜಿಕ ಜಾಲತಾಣದ ವಿಷವರ್ತುಲದಲ್ಲಿ ಜಾತಿ ವಿಷಯ ಸಿಲುಕಿಕೊಂಡಿದ್ದು, ಇದು ಗಂಭೀರ ವಿಷಯವಾಗಿದೆ. ಬ್ರಾಹ್ಮಣ್ಯದ ಜೊತೆ ಗಟ್ಟಿಯಾಗಿ ನಿಂತುಕೊಂಡರೆ ಮಾತ್ರ ಬ್ರಾಹ್ಮಣರು ಉಳಿಯಲು ಸಾಧ್ಯ. ಸಜ್ಜನರ ನಿಷ್ಕ್ರಿಯತೆಯು ದುರ್ಜನರ ಸಕ್ರಿಯತೆಗಿಂತ ಹೆಚ್ಚು ಅಪಾಯಕಾರಿ,” ಎಂದು ಎಚ್ಚರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, “ರಾಜ್ಯದಲ್ಲಿ ಉತ್ತಮ ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದರೂ, 2021ರಿಂದ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಗ್ರಂಥಾಲಯ ಇಲಾಖೆಗಳು ಪುಸ್ತಕಗಳನ್ನು ಖರೀದಿಸುತ್ತಿಲ್ಲ. ಇದರಿಂದ ಲೇಖಕರಿಗೆ ಪ್ರೇರಣೆ ಸಿಗುವ ಬದಲು, ಸರ್ಕಾರ ತಣ್ಣೀರು ಎರಚುವ ಕೆಲಸ ಮಾಡುತ್ತಿದೆ,” ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮ ಸಂವಾದ ಮತ್ತು ಇತರ ಪ್ರಶಸ್ತಿಗಳು :
ಕಾರ್ಯಕ್ರಮದಲ್ಲಿ ‘ಸುಗುಣ ಮಾಲಾ’ ಪತ್ರಿಕೆಯ 40 ವರ್ಷಗಳ ಪಯಣದ ಬಗ್ಗೆ ಸಂಪಾದಕ ಸಲಹಾ ಮಂಡಳಿಯ ಸದಸ್ಯ ಓಂಪ್ರಕಾಶ್ ಭಟ್ಟ ಮಾಹಿತಿ ನೀಡಿದರು. ಇದೇ ವೇಳೆ ಹಿರಿಯ ಪತ್ರಕರ್ತರಾದ ಜಿತೇಂದ್ರ ಕುಂದೇಶ್ವರ, ನಿತ್ಯಾನಂದ ಎಸ್. ಪಡ್ರೆ, ಆಶಾ ಕೃಷ್ಣಸ್ವಾಮಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ಪ್ರೊ.ಸತ್ಯಬೋಧ ಜೋಶಿ ಹಾಗೂ ವೀಣಾ ಬನ್ನಂಜೆ ಅವರು ಪ್ರಸ್ತುತ ಪತ್ರಿಕೋದ್ಯಮದ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಬೆಳಕು ಚೆಲ್ಲಿದರು. ಹಿರಿಯ ಪತ್ರಕರ್ತ ಲಕ್ಷ್ಮೀ ಮಚ್ಚಿನ ಮಾಧ್ಯಮ ಕ್ಷೇತ್ರದ ಸವಾಲುಗಳು ವಿಚಾರಗೋಷ್ಠಿಯನ್ನು ನಿರೂಪಿಸಿದರು.

ಹಿರಿಯ ಪತ್ರಕರ್ತ ನಿತ್ಯಾನಂದ ಎಸ್.ಪಡ್ರೆ ಮಾಧ್ಯಮ ಕ್ಷೇತ್ರದ ಸವಾಲುಗಳು ಎಂಬ ವಿಷಯದ ಕುರಿತಾಗಿ, ಪತ್ರಿಕೋದ್ಯಮದಲ್ಲಿ ಪತ್ರಿಕೆ ಮಾಲೀಕರ ಆಶಯಕ್ಕೆ ತಕ್ಕಂತೆ ಸುದ್ದಿ ಹಾಕುವ ಪ್ರಭುಶಕ್ತಿ, ಪತ್ರಿಕೆ ನಡೆಸಲು ಅಗತ್ಯವಾದ ಜಾಹೀರಾತಿನ ಅವಶ್ಯಕತೆಯಿರುವ ಬಗ್ಗೆ ಆರ್ಥಿಕ ಶಕ್ತಿ, ಭೌತಿಕಶಕ್ತಿ ಹಾಗೂ ಸುದ್ದಿ ಹಾಕುವಾಗ ತಮ್ಮವರು, ಬೇರೆಯವರಿಗೆ ಸೇರಿದ ಸುದ್ದಿಗಳೆಂದು ಬೇರ್ಪಡಿಸುವ ಭಾವನಾತ್ಮಕತೆಯ ಪರಿಧಿಯಲ್ಲಿ ಸಿಲುಕುವ ವಾಸ್ತವತೆಯನ್ನು ಅವರು ತೆರೆದಿಟ್ಟರು.
ನಾವೀಗ ವಿಷಯವನ್ನು ರಚಿಸಬಹುದು. ಆದರೆ ಪತ್ರಕರ್ತರು ತಮ್ಮ ಖಚಿತ ಸುದ್ದಿ ಮೂಲ ಆಧರಿಸಿ ಬರೆಯುವುದು ಸುದ್ದಿಯಾಗುತ್ತದೆ. ಪತ್ರಿಕೋದ್ಯಮಕ್ಕೆ ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸವಾಲುಗಳಿವೆ. ಇದಕ್ಕೆ ತಂತ್ರಜ್ಞಾನದ ನೆರವನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಅನಿವಾರ್ಯತೆಯಿದೆ. ಮಕ್ಕಳಲ್ಲಿ ಇಂಟರ್ನೆಟ್ ಬಂದಿರೋದರಿಂದ ಕಲಿಯುವ, ಸಂಶೋಧಿಸುವ ಮನಸ್ಥಿತಿಯಿಲ್ಲ. ಸಂಶೋಧನೆ ಅಂದರೆ ಗೂಗಲ್ ಸಂಶೋಧನೆಯಂತಾಗಿದೆ ಎಂದು ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ ಅಭಿಪ್ರಾಯಪಟ್ಟರು.
ಬನ್ನಂಜೆ ಗೋವಿಂದಾಚಾರ್ಯರ ಪುತ್ರಿಯರಾದ ವೀಣಾ ಬನ್ನಂಜೆ ಅವರು, ಮಹಾಭಾರತದಲ್ಲಿ ಸಂಜಯ ಅವರು ಸರ್ವ ಕಾಲಕ್ಕೂ ಉತ್ತಮವಾದ ವರದಿಗಾರರಾಗಿದ್ದರು. ತಾವು ಕಂಡಿದ್ದನ್ನು ಕಂಡಹಾಗೇ ವರದಿಗೆ ಚ್ಯುತಿಯಾಗದಂತೆ ತಿಳಿಸುವ ಅವರು ಎಲ್ಲಾ ಕಾಲಕ್ಕೂ ಪತ್ರಿಕೋದ್ಯಮಕ್ಕೆ ಆದರ್ಶಪ್ರಾಯರಾಗಿದ್ದರು. ತಮ್ಮ ತಂದೆ ಉದಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಾ ತತ್ವಜ್ಞಾನ ಕ್ಷೇತ್ರದಲ್ಲಿ ಉಪನ್ಯಾಸ ಕಾರ್ಯಕ್ರಮ ನೀಡುತ್ತಾ ವೃತ್ತಿಯಲ್ಲಿ ಹೇಗೆ ಸಮತೋಲನ ಕಾಯ್ದುಕೊಂಡಿದ್ದರು ಎಂದು ಸ್ಮರಿಸಿದರು.
ವಿಜಯವಾಣಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾದ ಜಿತೇಂದ್ರ ಕುಂದೇಶ್ವರ ಮಾತನಾಡುತ್ತಾ,”ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕಂಟೆಂಟ್ ನಲ್ಲಿ ಬಳಸುತ್ತಿರುವುದು ಸಮಾಜ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ಮನಗಾಣಬೇಕು. ವಿಪ್ರೋತ್ತಮ ಮೊದಲು ಒಬ್ಬನೇ ಬರುತ್ತಿದ್ದಾಗ ಎಲ್ಲರೂ ಬಗ್ಗುತ್ತಿದ್ದರು. ಈಗ ಕಾಲ ಬದಲಾಗಿದೆ. ವಿಪ್ರರು ಒಗ್ಗೂಡಿ ನಮ್ಮ ಬಲ ಹೆಚ್ಚಿಸಿಕೊಳ್ಳಬೇಕು. ವಿಪ್ರರು ಜಾತಿ ಬಲದಿಂದಾಗಿ ರಾಜಕೀಯವಾಗಿ ಅಪ್ರಸ್ತುತರರು ಎನ್ನುವಂತಾಗಿದೆ. ಹಾಗಾಗಿ ನಾವೆಲ್ಲಾ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಸಂಘಟಿತರಾಗಬೇಕು ಎಂದು ಉದಾಹರಣೆ ಸಹಿತ ವಿವರಿಸಿದರು.

ಶಾಸಕರಾದ ಯಶಪಾಲ್ ಸುವರ್ಣ, ಮಾಜಿ ಶಾಸಕರಾದ ರಘುಪತಿ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಕಾಸ ಕರಾವಳಿ ಉತ್ಸವದ ಆರಂಭದಲ್ಲಿ ಕುಮಾರಿ ಸ್ಪೂರ್ತಿ ಎಚ್. ಯಾವಗಲ್ ಅವರು ಆಕರ್ಷಕವಾಗಿ ಕಥಕ್ ನೃತ್ಯ ಪ್ರದರ್ಶಿಸಿದರು. ವಿಕಾಸ ಸಂಸ್ಥೆಯ ಅಧ್ಯಕ್ಷ ಶ್ರೀನಾಥ್ ಜೋಶಿ ಹಾಗೂ ಪ್ರಧಾನ ಕಾರ್ಯದರ್ಶಿ ಹನುಮೇಶ್ ಯಾವಗಲ್ ವಿಕಾಸ ಸಂಸ್ಥೆಯ ಪ್ರಾರಂಭವಾದ ಬಗೆ, ಉದ್ದೇಶಗಳ ಬಗ್ಗೆ ತಿಳಿಸಿದರು. ಆಧ್ಯಾತ್ಮಕ ಚಿಂತಕರಾದ ಗುರುರಾಜ್ ಪೋಶೆಟ್ಟಿಹಳ್ಳಿ ಇಡೀ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಕರಾವಳಿ ವಿಕಾಸ ಸಂಭ್ರಮದಲ್ಲಿ “ಹಸಿಗನಸು” ಕಾದಂಬರಿ, “ಗೋಪಾಳದಿಂದ ನೇಪಾಳದೆಡೆಗೆ” ಪ್ರವಾಸ ಕಥನ ಹಾಗೂ ಹಿಂದೂ ಧರ್ಮದ ಆಚರಣೆಗೆ ವೈಜ್ಞಾನಿಕ ತಳಹದಿ ಸೂಚಿಸುವ ಸಂಶೋಧನಾತ್ಮಕ ಪುಸ್ತಕ “ದಿ ಅಸ್ತ್ರ ಕೋಡೆಕ್ಸ್” ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ಯಾಮ್ ಎಸ್. ಅವರಲ್ಲದೆ, ವಿವಿಧ ಸಾಧಕರಿಗೆ ಹಿರಿಯ ಪತ್ರಕರ್ತರ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು:

* ಕಿರಣ್ ಮಂಜನಬೈಲು (ಸಂಯುಕ್ತ ಕರ್ನಾಟಕ) – ಪಾ. ವೆಂ. ಆಚಾರ್ಯ ಪ್ರಶಸ್ತಿ
* ಡಾ. ಮಂದಾರ ರಾಜೇಶ್ ಭಟ್ – ಬನ್ನಂಜೆ ಗೋವಿಂದಾಚಾರ್ಯ ಪ್ರಶಸ್ತಿ
* ಸಾಂತೂರು ಶ್ರೀನಿವಾಸ ತಂತ್ರಿ – ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ
* ಚಂದ್ರಶೇಖರ ಕುಳಮರ್ವ (ಉಪಯುಕ್ತ ನ್ಯೂಸ್) – ದಾಮೋದರ ಕಕ್ರಣ್ಣಾಯ ಪ್ರಶಸ್ತಿ
* ಆರ್. ಸಿ. ಭಟ್ ಸುಳ್ಯ (ವಿಜಯ ಕರ್ನಾಟಕ) – ಮಾಧವ ಆಚಾರ್ಯ ಪ್ರಶಸ್ತಿ
* ಶ್ವೇತಾ ಇಂದಾಜೆ (ಆಕಾಶವಾಣಿ) – ದಾಮೋದರ ಐತಾಳ ಪ್ರಶಸ್ತಿ
* ವೆಂಕಟೇಶ್ ಪೈ (ಸಂಜೆ ಪ್ರಭ) – ಸಂತೋಷ್ ಕುಮಾರ್ ಗುಲ್ವಾಡಿ ಪ್ರಶಸ್ತಿ
* ಶ್ರೀಕೃಷ್ಣ ಭಟ್ ಮಾಯ್ಲೆಂಗಿ (ವೈದ್ಯ ಲೋಕ) – ಈಶ್ವರಯ್ಯ ಅನಂತಪುರ ಪ್ರಶಸ್ತಿ
* ಹರೀಶ್ ಕೆ. ಅರು (ಹೊಸ ದಿಗಂತ) – ಮಂಜುನಾಥ್ ಭಟ್ ಪ್ರಶಸ್ತಿ






















