ಬೆಂಗಳೂರು, ಡಿ.05 www.bengaluruwire.com : ನಗರದ ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಇಂದು (ಗುರುವಾರ) ಬೆಳಿಗ್ಗೆ ಆಘಾತಕಾರಿ ಘಟನೆಯೊಂದು ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲಿಗೆ ಹಾರಿ ಸುಮಾರು 25 ವರ್ಷದ ಅಪರಿಚಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ವಿವರ: ಬೆಳಿಗ್ಗೆ 8.15 ರಿಂದ 8.20ರ ಸುಮಾರಿಗೆ ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಕಡೆಗೆ ತೆರಳುತ್ತಿದ್ದ ರೈಲು ಕೆಂಗೇರಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಪ್ಲಾಟ್‌ಫಾರ್ಮ್‌ನಲ್ಲಿದ್ದ ಯುವಕ ಏಕಾಏಕಿ ಹಳಿಗೆ ಧುಮುಕಿದ್ದಾನೆ. ಪರಿಣಾಮವಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಾರ್ಗ ಬದಲಾವಣೆ ಮತ್ತು ವ್ಯತ್ಯಯ:
ಆತ್ಮಹತ್ಯೆಯ ಘಟನೆಯಿಂದಾಗಿ ನೇರಳೆ ಮಾರ್ಗದ (Purple Line) ರೈಲು ಸೇವೆಯಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು. ಸುರಕ್ಷತಾ ದೃಷ್ಟಿಯಿಂದ ಜ್ಞಾನಭಾರತಿ ಮತ್ತು ಚಲ್ಲಘಟ್ಟ ನಿಲ್ದಾಣಗಳ ನಡುವಿನ ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಈ ಅವಧಿಯಲ್ಲಿ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮಾತ್ರ ರೈಲುಗಳು ಸಂಚರಿಸಿದವು, ಇದರಿಂದಾಗಿ ಕಚೇರಿಗೆ ತೆರಳುವ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು.

ಪೊಲೀಸ್ ಪರಿಶೀಲನೆ ಮತ್ತು ಮರುಚಾಲನೆ:
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದರು. ಮೃತದೇಹವನ್ನು ಹಳಿಯಿಂದ ತೆರವುಗೊಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಮೃತನ ಹೆಸರು ಮತ್ತು ವಿಳಾಸದ ಬಗ್ಗೆ ತನಿಖೆ ಮುಂದುವರಿದಿದೆ.
ಪೊಲೀಸ್ ಮಹಜರು ಪ್ರಕ್ರಿಯೆ ಮುಗಿದ ಬಳಿಕ ಬೆಳಿಗ್ಗೆ 9.40ರ ಸುಮಾರಿಗೆ ನೇರಳೆ ಮಾರ್ಗದ ಸೇವೆಯನ್ನು ಯಥಾಸ್ಥಿತಿಗೆ ತರಲಾಗಿದ್ದು, ರೈಲು ಸಂಚಾರ ಪುನರಾರಂಭಗೊಂಡಿದೆ ಎಂದು ಬಿಎಂಆರ್‌ಸಿಎಲ್ (BMRCL) ಪ್ರಕಟಣೆ ತಿಳಿಸಿದೆ.
ಆತಂಕಕಾರಿ ಬೆಳವಣಿಗೆ:
ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳು ಆತ್ಮಹತ್ಯೆಯ ತಾಣಗಳಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುರಕ್ಷಿತ ಪ್ರಯಾಣಕ್ಕೆ ಹೆಸರಾಗಬೇಕಾದ ನಿಲ್ದಾಣಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಕಳವಳಕಾರಿ ವಿಷಯವಾಗಿದೆ. (ಪ್ರಾತಿನಿಧಿಕ ಎಐ ಚಿತ್ರ ಕೃಪೆ : Gemini)






















