ಬೆಂಗಳೂರು, ಡಿ.05 www.bengaluruwire.com : ಐಟಿ ಹಬ್ ಎಂದು ಕರೆಯಲ್ಪಡುವ ವೈಟ್‌ಫೀಲ್ಡ್ ಭಾಗದ ವಿದ್ಯುತ್ ಗ್ರಾಹಕರಿಗೆ ಇನ್ಮುಂದೆ ತ್ವರಿತ ಸೇವೆ ದೊರೆಯಲಿದ್ದು, ಬಹುದಿನಗಳ ಬೇಡಿಕೆಯಾಗಿದ್ದ ಬೆಸ್ಕಾಂನ ನೂತನ ವಿಭಾಗೀಯ ಹಾಗೂ ಉಪವಿಭಾಗೀಯ ಕಚೇರಿಯನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು.
ಇಲ್ಲಿನ ಇಮ್ಮಡಿಹಳ್ಲಿ ಮುಖ್ಯರಸ್ತೆಯ ಗಾಂಧೀಪುರದಲ್ಲಿ ನಿರ್ಮಿಸಲಾದ ಈ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, “ಇದುವರೆಗೂ ವೈಟ್‌ಫೀಲ್ಡ್ ವಿಭಾಗ ಹಾಗೂ ಇ-4 ಉಪವಿಭಾಗ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಸ್ಥಳಾಭಾವದ ಸಮಸ್ಯೆಯೂ ಇತ್ತು. ಇದೀಗ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣವಾಗಿದ್ದು, ಎರಡೂ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿವೆ. ಇದರಿಂದ ಗ್ರಾಹಕರ ಅಲೆದಾಟ ತಪ್ಪಲಿದ್ದು, ಸೇವೆಗಳು ಸುಲಭವಾಗಿ ದೊರೆಯಲಿವೆ,” ಎಂದು ತಿಳಿಸಿದರು.
ಮೂಲಸೌಕರ್ಯ ಮತ್ತು ಸಾಮರ್ಥ್ಯ:
ನಗರದ ಪ್ರಮುಖ ವಾಣಿಜ್ಯ ಹಾಗೂ ವಸತಿ ಪ್ರದೇಶವಾಗಿರುವ ವೈಟ್‌ಫೀಲ್ಡ್ ವಿಭಾಗವು ಸುಮಾರು 3,88,917 ಕ್ಕೂ ಹೆಚ್ಚಿನ ವಿದ್ಯುತ್ ಗ್ರಾಹಕರನ್ನು ಹೊಂದಿದೆ. ಈ ಬೃಹತ್ ಸಂಖ್ಯೆಯ ಗ್ರಾಹಕರಿಗೆ ಸೇವೆ ಒದಗಿಸಲು ಹಳೆಯ ಕಟ್ಟಡ ಸಾಕಾಗುತ್ತಿರಲಿಲ್ಲ. ನೂತನ ಕಟ್ಟಡವು ಬೆಸ್ಕಾಂನ ವಿವಿಧ ಸೇವೆಗಳನ್ನು ತ್ವರಿತವಾಗಿ ಒದಗಿಸಲು ನೆರವಾಗಲಿದೆ. ಇದೇ ವೇಳೆ, ಕಚೇರಿ ನಿರ್ಮಾಣಕ್ಕೆ ಜಾಗ ಒದಗಿಸಲು ಶ್ರಮಿಸಿದ ಸ್ಥಳೀಯ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಅವರಿಗೆ ಸಚಿವರು ಧನ್ಯವಾದ ಅರ್ಪಿಸಿದರು.

ಕಟ್ಟಡದ ತಾಂತ್ರಿಕ ವಿಶೇಷತೆಗಳು:
ಸಾರ್ವಜನಿಕರ ತೆರಿಗೆ ಹಣದ ಸದ್ಬಳಕೆಯಾಗಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಈ ಕಟ್ಟಡ ಹೊಂದಿದೆ.
* ಒಟ್ಟು ವಿಸ್ತೀರ್ಣ: 13,687 ಚದರ ಅಡಿ.
* ರಚನೆ: ನೆಲ ಅಂತಸ್ತು ಸೇರಿದಂತೆ ಒಟ್ಟು ಮೂರು ಅಂತಸ್ತುಗಳು (G+3).
* ಯೋಜನಾ ವೆಚ್ಚ: ಅಂದಾಜು 4.25 ಕೋಟಿ ರೂಪಾಯಿಗಳು.
ಕಾರ್ಯಕ್ರಮದಲ್ಲಿ ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳ ಅರವಿಂದ ಲಿಂಬಾವಳಿ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ. ರಮೇಶ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















