ಬೆಂಗಳೂರು, ಡಿ.05 www.bengaluruwire.com : ಭಾರತದ ಪ್ರಥಮ ಬಾಹ್ಯಾಕಾಶ ವೀಕ್ಷಣಾಲಯವಾದ ‘ಆಸ್ಟ್ರೋಸ್ಯಾಟ್’ನ (AstroSat) ಪ್ರಮುಖ ಭಾಗವಾದ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (UVIT) ಬಾಹ್ಯಾಕಾಶದಲ್ಲಿ ತನ್ನ ಯಶಸ್ವಿ 10 ವರ್ಷಗಳ ಕಾರ್ಯಾಚರಣೆಯನ್ನು ಪೂರೈಸುವ ಮೂಲಕ ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
2015ರ ಸೆಪ್ಟೆಂಬರ್ 28 ರಂದು ಇಸ್ರೋ ಉಡಾವಣೆ ಮಾಡಿದ ಆಸ್ಟ್ರೋಸ್ಯಾಟ್‌ನಲ್ಲಿ, ಯುವಿಐಟಿ (UVIT) ಪ್ರಾಥಮಿಕ ಪೇಲೋಡ್ ಆಗಿ ಕಾರ್ಯನಿರ್ವಹಿಸುತ್ತಿದೆ. ಈ ಮಹತ್ವದ ಸಾಧನೆಯನ್ನು ಸ್ಮರಣಾತ್ಮ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ (IIA) ಗುರುವಾರದಂದು ವಿಶೇಷ ಶೈಕ್ಷಣಿಕ ಕಾರ್ಯಾಗಾರವನ್ನು ಆಯೋಜಿಸಿತ್ತು.
ವಿಶ್ವದ ಗಮನ ಸೆಳೆದ ಭಾರತದ ಕಣ್ಣು :
ಈ ಕಾರ್ಯಾಗಾರದಲ್ಲಿ ಮಾತನಾಡಿದ ಐಐಎ ನಿರ್ದೇಶಕಿ ಪ್ರೊ. ಅನ್ನಪೂರ್ಣ ಸುಬ್ರಮಣಿಯಂ, “ಭೂಮಿಯ ವಾತಾವರಣವು ನೇರಳಾತೀತ (UV) ಕಿರಣಗಳನ್ನು ಹೀರಿಕೊಳ್ಳುವುದರಿಂದ, ಇವುಗಳನ್ನು ಬಾಹ್ಯಾಕಾಶ ದೂರದರ್ಶಕಗಳ ಮೂಲಕ ಮಾತ್ರ ವೀಕ್ಷಿಸಲು ಸಾಧ್ಯ. ಹಬಲ್ ಟೆಲಿಸ್ಕೋಪ್ ಹೊರತುಪಡಿಸಿದರೆ, ದೂರದ ಯುವಿ (Far-UV) ಕಿರಣಗಳನ್ನು ವೀಕ್ಷಿಸುವ ಸಾಮರ್ಥ್ಯವಿರುವ ಏಕೈಕ ಕಾರ್ಯಾಚರಣಾ ದೂರದರ್ಶಕ ನಮ್ಮ ಯುವಿಐಟಿ ಆಗಿದೆ” ಎಂದು ಹೆಮ್ಮೆಯಿಂದ ವಿವರಿಸಿದರು.


ನಾಸಾದ (NASA) ಗ್ಯಾಲೆಕ್ಸ್‌ಗಿಂತ (GALEX) ಉತ್ತಮವಾದ ರೆಸಲ್ಯೂಶನ್ (1.5 ಆರ್ಕ್‌ಸೆಕೆಂಡ್‌ಗಳು) ಮತ್ತು ದೊಡ್ಡ ವೀಕ್ಷಣಾ ಕ್ಷೇತ್ರವನ್ನು ಹೊಂದಿರುವುದು ಈ ದೂರದರ್ಶಕದ ವಿಶೇಷತೆಯಾಗಿದೆ.
ಸಂಶೋಧನೆಯಲ್ಲಿ ಕ್ರಾಂತಿ :
ಕಳೆದ ಒಂದು ದಶಕದಲ್ಲಿ ಯುವಿಐಟಿ ಆಕಾಶದಲ್ಲಿ ಒಟ್ಟು 1451 ಬಾಹ್ಯಾಕಾಶದ ಗುರಿಗಳನ್ನು ವೀಕ್ಷಿಸಿದೆ. ಈ ದತ್ತಾಂಶವನ್ನು ಬಳಸಿಕೊಂಡು ದೇಶ-ವಿದೇಶಗಳ ವಿಜ್ಞಾನಿಗಳು ಸುಮಾರು 3೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಹಾಗೂ 19 ಪಿಎಚ್‌ಡಿ ಪ್ರಬಂಧಗಳು ಸಲ್ಲಿಕೆಯಾಗಿವೆ. ನಕ್ಷತ್ರಗಳ ರಚನೆ, ಬ್ಲೂ ಸ್ಟ್ರಾಗ್ಲರ್ ನಕ್ಷತ್ರಗಳ ಆವಿಷ್ಕಾರ ಮತ್ತು ಆಂಡ್ರೆಮಿಡಾ ನಕ್ಷತ್ರಪುಂಜದ ಅಧ್ಯಯನದಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ.

ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಮಾತನಾಡಿ, “ದೇಶದಲ್ಲಿ ಬದಲಾವಣೆ ತರಲು ಇಂತಹ ಬಹು-ಸಾಂಸ್ಥಿಕ ಯೋಜನೆಗಳ ಅಗತ್ಯವಿದೆ. ಆಸ್ಟ್ರೋಸ್ಯಾಟ್ ಮತ್ತು ಯುವಿಐಟಿ ಯಶಸ್ಸಿನ ಕಥೆಯು ವಿಶ್ವವನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದೆ,” ಎಂದು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ‘ಇನ್ಸಿಸ್ಟ್’ (INSIST) ಹೆಸರಿನ ಮುಂದಿನ ತಲೆಮಾರಿನ ಬಾಹ್ಯಾಕಾಶ ದೂರದರ್ಶಕದ ಬಗ್ಗೆಯೂ ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು.






















