ಬೆಂಗಳೂರು, ಡಿ.04 www.bengaluruwire.com : ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಸಿಹಿಸುದ್ದಿ ನೀಡಿದ್ದು, ಬಹುನಿರೀಕ್ಷಿತ ಹಾಗೂ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಮಾದರಿಯ ಚಾಲನಾ ಪರವಾನಗಿ (DL) ಮತ್ತು ನೋಂದಣಿ ಪ್ರಮಾಣ ಪತ್ರ (RC) ಸ್ಮಾರ್ಟ್ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಲಾಗಿದೆ.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಡಿ.3ರಂದು ಬೆಂಗಳೂರಿನ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಈ ಜನಸ್ನೇಹಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಡಿ.1 ರಿಂದಲೇ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳ ಅವಧಿಗೆ ಈ ಯೋಜನೆಯು ಕಾರ್ಯರೂಪದಲ್ಲಿರಲಿದೆ.
ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು “ಒಂದು ದೇಶ, ಒಂದು ಕಾರ್ಡ್ ಇರಬೇಕೆಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಹೀಗಾಗಿ ಒಂದೇ ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಮುದ್ರಿಸಿ ವಾಹನ ಮಾಲೀಕರಿಗೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಪಾಲಿವಿನೈಲ್ ಕ್ಲೋರೈಡ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿತ್ತು” ಎಂದು ಅವರು ಹೇಳಿದರು.

ಈ ಸ್ಮಾರ್ಟ್ ಕಾರ್ಡ್ ನ ವಿಶೇಷತೆಯೇನು? :

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಅಧಿಸೂಚನೆಯನ್ವಯ, ‘ಒಂದು ರಾಷ್ಟ್ರ – ಒಂದು ಕಾರ್ಡ್’ ಮಾದರಿಯಲ್ಲಿ ದೇಶಾದ್ಯಂತ ಏಕರೂಪದ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಇವು ಸಾಮಾನ್ಯ ಪ್ಲಾಸ್ಟಿಕ್ ಕಾರ್ಡ್‌ಗಳಲ್ಲ, ಬದಲಾಗಿ ಅತ್ಯಂತ ಬಾಳಿಕೆ ಬರುವ ಪಾಲಿಕಾರ್ಬೊನೇಟ್ ವಸ್ತುವಿನಿಂದ ತಯಾರಿಸಲ್ಪಟ್ಟಿವೆ.
ಈ ಕಾರ್ಡ್‌ಗಳಲ್ಲಿ ಲೇಸರ್ ಕೆತ್ತನೆ ಮೂಲಕ ಅಕ್ಷರಗಳನ್ನು ಮುದ್ರಿಸಲಾಗುತ್ತದೆ. 64ಕೆಬಿ ಸಾಮರ್ಥ್ಯದ ಮೈಕ್ರೋ ಚಿಪ್ ಹಾಗೂ ಎನ್‌ಐಸಿ (NIC) ತಂತ್ರಾಂಶದ ಕ್ಯುಆರ್ (QR) ಕೋಡ್ ಅಳವಡಿಸಲಾಗಿದ್ದು, ನಕಲಿ ಹಾವಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ರತಿದಿನ 16 ಸಾವಿರ ಕಾರ್ಡ್ ಮುದ್ರಣ:
ರೋಸ್ಮಾರ್ಟ ಟೆಕ್ನಾಲಜಿಸ್ (Rosmerta Technologies Ltd.) ಸಂಸ್ಥೆಯು ಈ ಯೋಜನೆಯ ಉಸ್ತುವಾರಿ ವಹಿಸಿದೆ. ಇದಕ್ಕಾಗಿ ಇಟಲಿಯಿಂದ ಅತ್ಯಾಧುನಿಕ ‘ಮಾಟಿಕಾ ಫಿನ್ ಟೆಕ್’ ಕಂಪನಿಯ S-7000 ಮಾದರಿಯ ಎರಡು ಪ್ರಿಂಟಿಂಗ್ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ತಂತ್ರಜ್ಞಾನ ಬಳಸಲಾಗುತ್ತಿದ್ದು, ಪ್ರತಿ ಯಂತ್ರಗಳು ಗಂಟೆಗೆ 600 ಹಾಗೂ ದಿನಕ್ಕೆ ಸುಮಾರು 15 ರಿಂದ 16 ಸಾವಿರ ಸ್ಮಾರ್ಟ್ ಕಾರ್ಡ್‌ಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿವೆ. ಶೀಘ್ರವೇ ಮತ್ತೊಂದು ಯಂತ್ರ ಲಭ್ಯವಾಗಲಿದೆ.
ಸ್ಮಾರ್ಟ್ ಕಾರ್ಡ್ ದರ ಎಷ್ಟು? ತಲುಪುವುದು ಹೇಗೆ? :
ಪ್ರತಿ ಸ್ಮಾರ್ಟ್ ಕಾರ್ಡ್‌ಗೆ ಸಾರ್ವಜನಿಕರು ಪಾವತಿಸಬೇಕಾದ ಶುಲ್ಕ ₹200 ಮಾತ್ರ. ಮುದ್ರಣಗೊಂಡ ಕಾರ್ಡ್‌ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ನೇರವಾಗಿ ವಾಹನ ಮಾಲೀಕರ ವಿಳಾಸಕ್ಕೆ ತಲುಪಿಸಲಾಗುತ್ತದೆ. ಡಿಎಲ್ (DL) ಸ್ಮಾರ್ಟ್ ಕಾರ್ಡ್‌ಗಳ ವಿತರಣೆಯು ಇದೇ ತಿಂಗಳ 15ರ ಎನ್‌ಐಸಿ ಸಾಫ್ಟ್‌ವೇರ್ ಇಂಟಿಗ್ರೇಷನ್ ಆದ ಬಳಿಕ ಆರಂಭವಾಗಲಿದೆ.
ದಂಡ ಪಾವತಿಗೆ ಶೇ.50 ಬಂಪರ್ ಆಫರ್:
ಇದೇ ವೇಳೆ ಸಾರಿಗೆ ಇಲಾಖೆಯು ಮತ್ತೊಂದು ಮಹತ್ವದ ಆದೇಶ ಹೊರಡಿಸಿದ್ದು, 1991-92 ರಿಂದ 2019-20ರ ಅವಧಿಯಲ್ಲಿ ದಾಖಲಾಗಿ ಬಾಕಿ ಉಳಿದಿರುವ ಇಲಾಖೆಗೆ ಸಂಬಂಧಿಸಿದ ಶಾಸನ (DSA) ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಿಸಿದೆ. ವಾಹನ ಮಾಲೀಕರು ಡಿ.12ರ ಒಳಗೆ ತಮ್ಮ ಹತ್ತಿರದ ಆರ್‌ಟಿಒ ಕಚೇರಿಗೆ ಭೇಟಿ ನೀಡಿ, ಅರ್ಧದಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. (Smart card, Smart Card Printing machine image Courtesy : Amazon, matica fintech)






















