ಬೆಂಗಳೂರು, ಡಿ.04 www.bengaluruwire.com : ರಾಜ್ಯದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ವಲಯವನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಮೂಲಕ ವಾರ್ಷಿಕ 150 ಬಿಲಿಯನ್ ಡಾಲರ್ ವಹಿವಾಟು ಸಾಧಿಸುವ ಮಹತ್ವಾಕಾಂಕ್ಷೆಯೊಂದಿಗೆ ಸಮಗ್ರ ‘ವಿಷನ್ ಡಾಕ್ಯುಮೆಂಟ್’ (Vision Document) ಸಿದ್ಧಪಡಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮಹೀಂದ್ರೂ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ನಡೆದ ವಿಸ್ತೃತ ಸಭೆಯಲ್ಲಿ ಸಚಿವರು ಈ ವಿಷಯ ತಿಳಿಸಿದರು.

ರಾಜ್ಯ ಸರಕಾರದ ಹೊಸ ನಡೆ:
ಕೇಂದ್ರ ಸರಕಾರವು ಏಪ್ರಿಲ್‌ನಲ್ಲಿ ಘೋಷಿಸಿದ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಗೆ ಪೂರಕವಾಗಿ, ರಾಜ್ಯ ಸರಕಾರವೂ ಸ್ವತಂತ್ರ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ. “ಪ್ರಸ್ತುತ ಈ ಯೋಜನೆಯು ಕರಡು ಹಂತದಲ್ಲಿದ್ದು, ಇದರ ಕಾರ್ಯಸಾಧ್ಯತೆಯ ಅಧ್ಯಯನ ನಡೆಯುತ್ತಿದೆ. ಐಸಿಇಎ ನೀಡುವ ಸಲಹೆಗಳನ್ನು ಈ ಕರಡಿನಲ್ಲಿ ಅಳವಡಿಸಿಕೊಳ್ಳಲು ಮುಕ್ತವಾಗಿದ್ದೇವೆ,” ಎಂದು ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.

ಕೇವಲ ಮೊಬೈಲ್ ಫೋನ್ ಬಿಡಿಭಾಗಗಳಲ್ಲದೆ, ಕೈಗಾರಿಕಾ ಮತ್ತು ಕಾರ್ಯತಂತ್ರ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲೂ ವಿಫುಲ ಅವಕಾಶಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರದ ಯೋಜನೆ ಮತ್ತು ಹೂಡಿಕೆ:
ಸಭೆಯಲ್ಲಿ ಮಾತನಾಡಿದ ಐಸಿಇಎ ಅಧ್ಯಕ್ಷ ಪಂಕಜ್ ಮಹೀಂದ್ರೂ, ಕೇಂದ್ರದ 22,900 ಕೋಟಿ ರೂ.ಗಳ ಯೋಜನೆಯಡಿ ಡಿಸ್‌ಪ್ಲೇ, ಕ್ಯಾಮೆರಾ ಮಾಡ್ಯೂಲ್‌ಗಳಂತಹ ಸಬ್-ಅಸೆಂಬ್ಲಿ ಹಾಗೂ ಬೇರ್ ಕಾಂಪೊನೆಂಟ್ಸ್ ತಯಾರಿಕೆಗೆ ಒತ್ತು ನೀಡಲಾಗುತ್ತಿದೆ ಎಂದು ವಿವರಿಸಿದರು. “ಈ ಯೋಜನೆಯಡಿ ಶೇ. 25ರಷ್ಟು ಬಂಡವಾಳ ಸಬ್ಸಿಡಿ ಮತ್ತು ಪ್ರೋತ್ಸಾಹನಾ ಭತ್ಯೆಗಳನ್ನು ನೀಡಲಾಗುತ್ತಿದೆ. ನವೆಂಬರ್ ಅಂತ್ಯದವರೆಗೆ 7,172 ಕೋಟಿ ರೂ. ಮೊತ್ತದ 17 ಹೂಡಿಕೆಗಳಿಗೆ ಕೇಂದ್ರ ಒಪ್ಪಿಗೆ ನೀಡಿದ್ದು, ಇದರಿಂದ ಸುಮಾರು 11,800 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ,” ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.























