ಬೆಂಗಳೂರು, ಡಿ.04 www.bengaluruwire.com : ರಾಜ್ಯದ ಪ್ರತಿಷ್ಠಿತ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಸತತ ನಾಲ್ಕನೇ ಬಾರಿಗೆ ‘ಎನ್‌ಎಬಿಎಚ್’ (NABH) ಮಾನ್ಯತೆಯನ್ನು ಮುಡಿಗೇರಿಸಿಕೊಂಡಿದ್ದು, ಈ ಸಾಧನೆಗೈದ ಏಕೈಕ ಸರ್ಕಾರಿ ಸ್ವಾಯತ್ತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಸ್ಪತ್ರೆ ಮತ್ತು ಆರೋಗ್ಯ ಸೇವೆ ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿ (NABH) ನಿಗದಿಪಡಿಸಿರುವ ಕಠಿಣ ಗುಣಮಟ್ಟದ ಮಾನದಂಡಗಳನ್ನು ಪೂರೈಸುವಲ್ಲಿ ಜಯದೇವ ಆಸ್ಪತ್ರೆ ಯಶಸ್ವಿಯಾಗಿದೆ. ಈ ವರ್ಷದ ಜುಲೈ ಅಂತ್ಯದಲ್ಲಿ ‘ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ’ದ 7 ಜನ ತಜ್ಞರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಪರಿಶೀಲನಾ ಪ್ರಕ್ರಿಯೆ ಹೇಗಿತ್ತು? :
ತಜ್ಞರ ತಂಡವು ಆಸ್ಪತ್ರೆಯ ಸ್ವಚ್ಛತೆ, ರೋಗಿಗಳ ನಿಗಾ ಕಡತಗಳ ನಿರ್ವಹಣೆ, ಹೊರರೋಗಿ ವಿಭಾಗ (OPD), ತುರ್ತು ಚಿಕಿತ್ಸಾ ಘಟಕ, ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಲ್ಯಾಬ್‌ಗಳ ಕಾರ್ಯಕ್ಷಮತೆಯನ್ನು ಕೂಲಂಕಷವಾಗಿ ಪರಿಶೀಲಿಸಿತ್ತು. ವರದಿಯ ಆಧಾರದ ಮೇಲೆ ರೋಗಿಗಳ ಸುರಕ್ಷತೆ ಮತ್ತು ಆರೈಕೆಯ ಗುಣಮಟ್ಟವನ್ನು ಪರಿಗಣಿಸಿ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ.

ಆಸ್ಪತ್ರೆ ನಿರ್ದೇಶಕರ ಮಾತು:
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಸಂಸ್ಥೆಯ ನಿರ್ದೇಶಕರಾದ ಡಾ. ಬಿ. ದಿನೇಶ್, “2015ರಿಂದ ನಿರಂತರವಾಗಿ ಜಯದೇವ ಆಸ್ಪತ್ರೆ ಎನ್‌ಎಬಿಎಚ್ ಮಾನ್ಯತೆ ಪಡೆಯುತ್ತಾ ಬಂದಿದೆ. ಪ್ರತಿದಿನ 1800ಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಆಗಮಿಸುತ್ತಿದ್ದು, ಅವರೆಲ್ಲರಿಗೂ ರಿಯಾಯಿತಿ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಸುರಕ್ಷತೆ ಮತ್ತು ಪಾರದರ್ಶಕ ಸೇವೆಗೆ ಸಂಸ್ಥೆ ಸದಾ ಬದ್ಧವಾಗಿದೆ,” ಎಂದು ತಿಳಿಸಿದ್ದಾರೆ.
ಸಂಸ್ಥೆಯು ಎಲ್ಲಾ ವರ್ಗದ ರೋಗಿಗಳಿಗೂ ತಾರತಮ್ಯವಿಲ್ಲದೆ, ಕೈಗೆಟುಕುವ ದರದಲ್ಲಿ ಜಾಗತಿಕ ಮಟ್ಟದ ವೈದ್ಯಕೀಯ ಸೇವೆ ಒದಗಿಸುತ್ತಿರುವುದಕ್ಕೆ ಈ ಮಾನ್ಯತೆ ಸಾಕ್ಷಿಯಾಗಿದೆ.























