ನವದೆಹಲಿ, ಡಿ.02 www.bengaluruwire.com : ದೇಶಾದ್ಯಂತ ಮನೆ ಬಾಡಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ‘ಮಾದರಿ ಬಾಡಿಗೆ ಕಾಯ್ದೆ’ (Model Tenancy Act) ಅನ್ವಯ 2025ರ ಹೊಸ ಬಾಡಿಗೆ ನಿಯಮಗಳನ್ನು ರೂಪಿಸಲಾಗಿದೆ. ಇದು ವಿಶೇಷವಾಗಿ ಬೆಂಗಳೂರು ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಬಾಡಿಗೆದಾರರು ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ದೊಡ್ಡ ಪರಿಹಾರ ನೀಡಲಿದೆ.
ಬಾಡಿಗೆದಾರರು ಮತ್ತು ಮಾಲೀಕರ ನಡುವಿನ ಸಂಬಂಧವನ್ನು ಸುಧಾರಿಸಲು ಹಾಗೂ ಅನಗತ್ಯ ಕಿರಿಕಿರಿಗಳನ್ನು ತಪ್ಪಿಸಲು ಈ ಹೊಸ ನಿಯಮಗಳು ಸಹಕಾರಿಯಾಗಲಿವೆ. ಭೂಮಿ ಮತ್ತು ಬಾಡಿಗೆ ವಿಷಯಗಳು ರಾಜ್ಯ ಪಟ್ಟಿಗೆ (State List) ಸೇರುವುದರಿಂದ, ಆಯಾ ರಾಜ್ಯ ಸರ್ಕಾರಗಳು ಈ ನಿಯಮಗಳನ್ನು ಅಳವಡಿಸಿಕೊಂಡ ತಕ್ಷಣ ಇವು ಜಾರಿಗೆ ಬರುತ್ತವೆ. ಇದರ ಮುಖ್ಯಾಂಶಗಳು ಇಲ್ಲಿವೆ:
1. ಭದ್ರತಾ ಠೇವಣಿ (Deposit) ಇನ್ನು ಮುಂದೆ 2 ತಿಂಗಳು ಮಾತ್ರ :
ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯಬೇಕೆಂದರೆ ಕನಿಷ್ಠ 6 ರಿಂದ 10 ತಿಂಗಳ ಬಾಡಿಗೆಯನ್ನು ಮುಂಗಡವಾಗಿ (Advance) ನೀಡಬೇಕಿತ್ತು. ಆದರೆ, 2025ರ ಹೊಸ ನಿಯಮದ ಪ್ರಕಾರ, ವಸತಿ ಉದ್ದೇಶದ ಮನೆಗಳಿಗೆ ಗರಿಷ್ಠ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಠೇವಣಿಯಾಗಿ ಪಡೆಯಲು ಅವಕಾಶವಿದೆ. ವಾಣಿಜ್ಯ ಬಳಕೆಯ ಕಟ್ಟಡಗಳಿಗೆ ಇದು ಆರು ತಿಂಗಳ ಬಾಡಿಗೆಗೆ ಸೀಮಿತವಾಗಿರುತ್ತದೆ. ಇದು ಐಟಿ ಉದ್ಯೋಗಿಗಳು ಮತ್ತು ಮಧ್ಯಮ ವರ್ಗದವರಿಗೆ ಭಾರೀ ನೆಮ್ಮದಿ ತಂದಿದೆ.

2. ಬಾಡಿಗೆ ಒಪ್ಪಂದ ನೋಂದಣಿ ಕಡ್ಡಾಯ : (Mandatory Registration)
ಇನ್ನು ಮುಂದೆ ಕೇವಲ ಬಾಯಿ ಮಾತಿನ ಅಥವಾ ಸಾಮಾನ್ಯ ಹಾಳೆಯಲ್ಲಿ ಬರೆದ ಬಾಡಿಗೆ ಒಪ್ಪಂದಗಳಿಗೆ ಬೆಲೆ ಇಲ್ಲ.
* ಪ್ರತಿಯೊಂದು ಬಾಡಿಗೆ ಒಪ್ಪಂದವನ್ನು 2 ತಿಂಗಳ ಒಳಗಾಗಿ ಆನ್‌ಲೈನ್ ಮೂಲಕ ಅಥವಾ ಸ್ಥಳೀಯ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಬೇಕು.
* ಒಂದು ವೇಳೆ ನೋಂದಣಿ ಮಾಡಿಸದಿದ್ದರೆ, 5,000 ರೂ. ದಂಡ ವಿಧಿಸಲಾಗುತ್ತದೆ.
* ಸರ್ಕಾರವೇ ನಿಗದಿಪಡಿಸಿದ ಪ್ರತ್ಯೇಕ ‘ಟೆಂಪ್ಲೇಟ್’ ಅಡಿಯಲ್ಲೇ ಈ ಒಪ್ಪಂದ ನಡೆಯಲಿದ್ದು, ಕೊನೆ ಗಳಿಗೆಯಲ್ಲಿ ಮಾಲೀಕರು ವಿಚಿತ್ರ ಷರತ್ತುಗಳನ್ನು ಹಾಕಲು ಸಾಧ್ಯವಿಲ್ಲ.
3. ಬಾಡಿಗೆ ಏರಿಕೆಗಿದೆ ಲಗಾಮು :
ಮನೆ ಮಾಲೀಕರು ಮನಸೋಇಚ್ಛೆ ಬಾಡಿಗೆ ಏರಿಸುವಂತಿಲ್ಲ.
* ವರ್ಷಕ್ಕೆ ಒಮ್ಮೆ ಮಾತ್ರ ಬಾಡಿಗೆ ಏರಿಕೆ ಮಾಡಬಹುದು.
* ಬಾಡಿಗೆ ಹೆಚ್ಚಿಸುವ ಮೊದಲು ಬಾಡಿಗೆದಾರರಿಗೆ 90 ದಿನಗಳ (ಮೂರು ತಿಂಗಳು) ಮುಂಚಿತವಾಗಿ ನೋಟಿಸ್ ನೀಡಬೇಕು.
4. ಡಿಜಿಟಲ್ ಪೇಮೆಂಟ್ ಮತ್ತು ತೆರಿಗೆ :
ಬಾಡಿಗೆ ವ್ಯವಹಾರದಲ್ಲಿ ಪಾರದರ್ಶಕತೆ ತರಲು, ಮಾಸಿಕ 5,000 ರೂ.ಗಿಂತ ಹೆಚ್ಚಿನ ಬಾಡಿಗೆಯನ್ನು ಯುಪಿಐ (UPI), ಬ್ಯಾಂಕ್ ವರ್ಗಾವಣೆ ಮುಂತಾದ ಡಿಜಿಟಲ್ ರೂಪದಲ್ಲೇ ಪಾವತಿಸುವುದು ಕಡ್ಡಾಯವಾಗಿದೆ. 50,000 ರೂ.ಗಿಂತ ಹೆಚ್ಚಿನ ಬಾಡಿಗೆ ಇದ್ದರೆ ಟಿಡಿಎಸ್ (TDS) ಕಡಿತ ಅನ್ವಯವಾಗುತ್ತದೆ.
5.ಬೆಂಗಳೂರು ಮತ್ತು ಮುಂಬೈ ಮೇಲೆ ಪ್ರಭಾವವೇನು?
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತಿ ಹೆಚ್ಚು ಬಾಡಿಗೆದಾರರಿದ್ದಾರೆ. ಎಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ ಅಡ್ವಾನ್ಸ್ ಮೊತ್ತವೇ ಲಕ್ಷಾಂತರ ರೂಪಾಯಿ ಆಗುತ್ತಿತ್ತು. ಹೊಸ ನಿಯಮ ಜಾರಿಯಾದರೆ, ವಲಸಿಗರಿಗೆ ಮತ್ತು ಯುವ ಉದ್ಯೋಗಿಗಳಿಗೆ ಬಾಡಿಗೆ ಮನೆ ಸಿಗುವುದು ಸುಲಭವಾಗಲಿದೆ. ಕರ್ನಾಟಕ ಸರ್ಕಾರವು ತನ್ನ ಅಸ್ತಿತ್ವದಲ್ಲಿರುವ ಕಾನೂನಿಗೆ ತಿದ್ದುಪಡಿ ತಂದು ಇದನ್ನು ಜಾರಿಗೆ ತಂದರೆ, ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಖಚಿತ.
ಮುಂಬೈ: ಮುಂಬೈನ ಪಗಡಿ ಪದ್ಧತಿ ಮತ್ತು ದುಬಾರಿ ಅಡ್ವಾನ್ಸ್‌ಗಳಿಗೆ ಇದು ಬ್ರೇಕ್ ಹಾಕಲಿದೆ. ಬಾಡಿಗೆದಾರರ ಶೋಷಣೆ ತಪ್ಪಲಿದ್ದು, ಬಾಡಿಗೆದಾರರಿಗೆ ಪೊಲೀಸ್ ಪರಿಶೀಲನೆ ಕಡ್ಡಾಯಗೊಳಿಸಿರುವುದರಿಂದ ಮಾಲೀಕರಿಗೂ ಸುರಕ್ಷತಾ ಭಾವ ಮೂಡಲಿದೆ.
6. ವಿವಾದಗಳಿಗೆ ತ್ವರಿತ ಪರಿಹಾರ :
ಬಾಡಿಗೆ ವಿಚಾರವಾಗಿ ಜಗಳವಾದರೆ ವರ್ಷಗಟ್ಟಲೆ ಕೋರ್ಟ್ ಅಲೆಯುವ ಅಗತ್ಯವಿಲ್ಲ. ಇದಕ್ಕಾಗಿ ವಿಶೇಷ ‘ಬಾಡಿಗೆ ನ್ಯಾಯಮಂಡಳಿ’ಗಳನ್ನು (Rent Tribunals) ಸ್ಥಾಪಿಸಲಾಗುತ್ತಿದ್ದು, ಯಾವುದೇ ದೂರು ದಾಖಲಾದ 60 ದಿನಗಳ ಒಳಗೆ ಪರಿಹಾರ ನೀಡಬೇಕೆಂಬುದು ಹೊಸ ನಿಯಮದ ಸಾರಾಂಶವಾಗಿದೆ.






















