ಬೆಂಗಳೂರು, ಡಿ.03 www.bengaluruwire.com : ದಕ್ಷಿಣ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಗಾಂಧಿ ಬಜಾರ್‌ನಲ್ಲಿ ಪಾದಚಾರಿಗಳಿಗೆ ಅಡ್ಡಿಯಾಗಿದ್ದ ಅನಧಿಕೃತ ಒತ್ತುವರಿಗಳನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ತೆರವುಗೊಳಿಸಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರ ನಿರ್ದೇಶನದಂತೆ, ಚಿಕ್ಕಪೇಟೆ ವಿಭಾಗದ ಗಾಂಧಿ ಬಜಾರ್ ವ್ಯಾಪ್ತಿಯಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆದಿದೆ. ಚಿಕ್ಕಪೇಟೆ ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್ ಕುಮಾರ್ ಅವರ ನೇತೃತ್ವದ ತಂಡವು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದು, ಫುಟ್‌ಪಾತ್ ಆಕ್ರಮಿಸಿಕೊಂಡಿದ್ದ ಮಳಿಗೆಗಳನ್ನು ತೆರವುಗೊಳಿಸಿತು.
ಎಚ್ಚರಿಕೆ ನೀಡಿದ್ದರೂ ಬಗ್ಗದ ವ್ಯಾಪಾರಿಗಳು:
ಗಾಂಧಿ ಬಜಾರ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸುಮಾರು 120 ಮಳಿಗೆಗಳಿಗೆ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ಕೊಡಲಾಗಿತ್ತು. ಆದರೆ, ವ್ಯಾಪಾರಿಗಳು ತಮಗೆ ನಿಗದಿಪಡಿಸಿದ ಸ್ಥಳವನ್ನು ಮೀರಿ, ಹೆಚ್ಚುವರಿ ಜಾಗವನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಒತ್ತುವರಿ ತೆರವುಗೊಳಿಸುವಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ವ್ಯಾಪಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಈ ದಿಢೀರ್ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೆಸಿಬಿ ಬಳಸಿ ತೆರವು:
ಕಾರ್ಯಾಚರಣೆಯಲ್ಲಿ 2 ಜೆಸಿಬಿ, 7 ಟ್ರ್ಯಾಕ್ಟರ್‌ಗಳು, 3 ಲಾರಿಗಳು ಹಾಗೂ 40ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಿಕೊಳ್ಳಲಾಯಿತು. ನಿಗದಿಪಡಿಸಿರುವ ಜಾಗಕ್ಕಿಂತ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಐದು ಪ್ರಮುಖ ಶಾಪ್‌ಗಳನ್ನು ಹಾಗೂ ಫುಟ್‌ಪಾತ್ ಮೇಲಿದ್ದ ಅತಿಕ್ರಮಣಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ಮುಂದಿನ ದಿನಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರವೇ ವ್ಯಾಪಾರ ಮಾಡಬೇಕು. ಇದನ್ನು ಮೀರಿ ಮತ್ತೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ರಾಜೇಂದ್ರ ಚೋಳನ್ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಕೃಷ್ಣಕುಮಾರ್, ರಾಮೇಗೌಡ ಹಾಗೂ ಮಾರ್ಷಲ್‌ಗಳು ಉಪಸ್ಥಿತರಿದ್ದರು.






















