ಬೆಂಗಳೂರು,ಡಿ.02 www.bengaluruwire.com : ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬೆಸ್ಕಾಂ ವ್ಯಾಪ್ತಿಯ ಸ್ಮಾರ್ಟ್ ಮೀಟರ್ ಅಳವಡಿಕೆ ಟೆಂಡರ್ ಅಕ್ರಮ ಆರೋಪ ಪ್ರಕರಣದಲ್ಲಿ, ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರಾಳತೆ (ರಿಲೀಫ್) ನೀಡಿದೆ.
ಈ ಸಂಬಂಧ ಬಿಜೆಪಿ ನಾಯಕರು ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ನೀಡಿದ್ದು, ಸಚಿವ ಜಾರ್ಜ್ ಮಾತ್ರವಲ್ಲದೆ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳಾದ ಗೌರವ್ ಗುಪ್ತಾ, ಮಹಾಂತೇಶ ಬೀಳಗಿ ಮತ್ತು ಹೆಚ್.ಜೆ. ರಮೇಶ್ ಅವರ ವಿರುದ್ಧದ ಪ್ರಕರಣವನ್ನೂ ರದ್ದುಗೊಳಿಸಿದೆ. ಮಹಾಂತೇಶ ಬೀಳಗಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಏನಿದು ಸ್ಮಾರ್ಟ್ ಮೀಟರ್ ವಿವಾದ? :
ರಾಜ್ಯದಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ, ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿತ್ತು. ಮುಖ್ಯವಾಗಿ ದಾವಣಗೆರೆ ಮೂಲದ ‘ರಾಜಶ್ರೀ ಎಲೆಕ್ಟ್ರಿಕಲ್ಸ್’ ಎಂಬ ಕಂಪನಿಗೆ ಅಕ್ರಮವಾಗಿ ಗುತ್ತಿಗೆ ನೀಡಲಾಗಿದೆ ಎಂಬುದು ಪ್ರಮುಖ ಆರೋಪವಾಗಿತ್ತು.

ಬಿಜೆಪಿ ಮಾಡಿದ್ದ ಪ್ರಮುಖ ಆರೋಪಗಳೇನು?:
ಖಾಸಗಿ ದೂರಿನಲ್ಲಿ ಬಿಜೆಪಿ ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿತ್ತು:
ದುಬಾರಿ ಬೆಲೆ ಸ್ಮಾರ್ಟ್ ಮೀಟರ್: ಇತರೆ ರಾಜ್ಯಗಳಲ್ಲಿ ಹಾಗೂ ಕೇಂದ್ರದ ಆರ್‌ಡಿಎಸ್‌ಎಸ್ (RDSS) ಯೋಜನೆಯಡಿ ಕೇವಲ 900 ರೂ.ಗೆ ಲಭ್ಯವಿರುವ ಸ್ಮಾರ್ಟ್ ಮೀಟರ್‌ಗಳನ್ನು, ಕರ್ನಾಟಕದಲ್ಲಿ ಗ್ರಾಹಕರಿಗೆ 5,000 ದಿಂದ 10,000 ರೂ. ವರೆಗೆ (ಸುಮಾರು 8,800 ರೂ.) ಮಾರಾಟ ಮಾಡಲಾಗುತ್ತಿದೆ.
ಟೆಂಡರ್ ನಿಯಮ ಉಲ್ಲಂಘನೆ: ಈ ಯೋಜನೆಯ ಮೊತ್ತ ಸುಮಾರು 10,000 ಕೋಟಿ ರೂ. ಆಗಿರುವುದರಿಂದ ಜಾಗತಿಕ ಟೆಂಡರ್ ಕರೆಯಬೇಕಿತ್ತು. ಆದರೆ, ಕೇವಲ 354 ಕೋಟಿ ರೂ. ವಹಿವಾಟು ನಡೆಸುವ ಸ್ಥಳೀಯ ಕಂಪನಿಗೆ ಮಣೆ ಹಾಕಲಾಗಿದೆ.
ಪಾರದರ್ಶಕತೆಯ ಕೊರತೆ: ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯಲ್ಲಿ ಇತರೆ ಕಂಪನಿಗಳು ಭಾಗವಹಿಸದಂತೆ ತಡೆಯಲಾಗಿದೆ. 10 ವರ್ಷಗಳ ಅವಧಿಗೆ ನೀಡಲಾದ 5,296 ಕೋಟಿ ರೂ. ಮೊತ್ತದ ಟೆಂಡರ್ ಅನ್ನು, ಕೇವಲ 997 ಕೋಟಿ ರೂ. ಎಂದು ತಪ್ಪಾಗಿ ಬಿಂಬಿಸಲಾಗಿತ್ತು ಹೇಳಲಾಗಿದೆ.
ವ್ಯಾಪ್ತಿ ಮೀರಿದ ಆದೇಶ: ಬೆಸ್ಕಾಂ ವ್ಯಾಪ್ತಿಗೆ ಸೀಮಿತವಾಗಿದ್ದ ಟೆಂಡರ್ ಅನ್ನು ಇತರೆ ಎಸ್ಕಾಂಗಳಿಗೂ (ವಿದ್ಯುತ್ ಸರಬರಾಜು ಕಂಪನಿಗಳು) ವಿಸ್ತರಿಸಿರುವುದು ಕಾನೂನುಬಾಹಿರ ಎಂದು ಆರೋಪಿಸಲಾಗಿತ್ತು.
ಈ ಎಲ್ಲಾ ಅಕ್ರಮಗಳಿಗೆ ಸಚಿವ ಕೆ.ಜೆ. ಜಾರ್ಜ್ ಹಾಗೂ ಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿ ಬಿಜೆಪಿ ನಾಯಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಪೀಠವು, ದಾಖಲಿಸಲಾಗಿದ್ದ ಖಾಸಗಿ ದೂರನ್ನು ರದ್ದುಪಡಿಸುವ ಮೂಲಕ ಸರ್ಕಾರಕ್ಕೆ ದೊಡ್ಡ ಗೆಲುವು ತಂದುಕೊಟ್ಟಿದೆ.






















