ಚೆನ್ನೈ, ನ.29 www.bengaluruwire.com : ಸಣ್ಣ ಮಕ್ಕಳಾಗಿದ್ದಾಗ ಎಷ್ಟೋ ಮಂದಿ, ತಾವು ಓಡಾಡುವ ಬಸ್ ತಾವೇ ಚಾಲನೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು, ಸೈಕಲ್ ಹಳೆಯ ಟೈರ್ ಗಾಲಿಯನ್ನು ಕೋಲು ಬಳಸಿ ಓಡಿಸುತ್ತಾ ಸಂತಸ ಪಡೆಯುತ್ತಿದ್ದರು. ಆದರೆ ತಮಿಳುನಾಡಿನ ಬಸ್ ಚಾಲಕನೊಬ್ಬ ಮಕ್ಕಳಿಗಾಗಿಹೊಸ ವ್ಯವಸ್ಥೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ವೈರಲ್ ಆಗಿದೆ.
ತಮಿಳುನಾಡಿನ ಬಸ್ ಚಾಲಕನೊಬ್ಬ ಪ್ರಯಾಣದ ವೇಳೆ ಮಕ್ಕಳ ಮನರಂಜನೆಗಾಗಿ ತಾವು ಕುಳಿತ ಸೀಟಿಗೆ ಸಮನಾಂತರವಾಗಿ ‘ಆಟಿಕೆ ಸ್ಟೀರಿಂಗ್’ (Toy Steering) ಅಳವಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಚಾಲಕ ಬಸ್ ಓಡಿಸುತ್ತಿದ್ದಂತೆ, ಪಕ್ಕದಲ್ಲೇ ಕುಳಿತಿರುವ ಬಾಲಕನೊಬ್ಬ ಉತ್ಸಾಹದಿಂದ ತನಗಾಗಿ ಅಳವಡಿಸಿರುವ ಪುಟ್ಟ ಸ್ಟೀರಿಂಗ್ ತಿರುಗಿಸುತ್ತಾ, ತಾನೇ ಬಸ್ ಓಡಿಸುತ್ತಿರುವಂತೆ ಸಂಭ್ರಮಿಸುವುದು ವಿಡಿಯೋದಲ್ಲಿದೆ. ಈ ದೃಶ್ಯ ಬಸ್‌ನಲ್ಲಿದ್ದ ಇತರ ಪ್ರಯಾಣಿಕರ ಮುಖದಲ್ಲೂ ಮಂದಹಾಸ ಮೂಡಿಸಿದೆ.
ಚಾಲಕನ ಐಡಿಯಾಗೆ ‘ಫಿದಾ’ ಆದ ನೆಟ್ಟಿಗರು:

ಬಸ್ ಚಾಲಕನ ಈ ವಿಭಿನ್ನ ಆಲೋಚನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್ ಮುಂಭಾಗವನ್ನು ಶಿವ ಮತ್ತು ಪಾರ್ವತಿಯ ವಿಗ್ರಹಗಳಿಂದ ಅಲಂಕರಿಸಲಾಗಿದ್ದು, ಗೇರ್ ಬಾಕ್ಸ್ ಅನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.
ಇದರೊಂದಿಗೆ ಮಕ್ಕಳಿಗಾಗಿ ಈ ಪುಟ್ಟ ಸ್ಟೀರಿಂಗ್ ಅಳವಡಿಸಿರುವುದು ಚಾಲಕನಿಗೆ, ಮಕ್ಕಳ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. “ಬಾಲ್ಯದಲ್ಲಿ ಬಸ್ ಡ್ರೈವರ್ ಆಗಬೇಕೆಂಬ ಎಷ್ಟೋ ಜನರ ಕನಸನ್ನು ಈ ಮಗು ಅನುಭವಿಸುತ್ತಿದೆ” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಚರ್ಚೆ:
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕರು ಚಾಲಕನ ಕಾರ್ಯವನ್ನು ಶ್ಲಾಘಿಸಿದರೆ, ಕೆಲವರು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಮಗು ಡ್ರೈವಿಂಗ್‌ನಲ್ಲಿ ಮಗ್ನನಾಗುವುದರಿಂದ ಎದುರಿಗೆ ಬರುವ ವಾಹನಗಳಿಗೆ ಗೊಂದಲ ಉಂಟಾಗಬಹುದು ಅಥವಾ ಮಗು ಬಾಗಿಲಿನ ಹತ್ತಿರ ಕುಳಿತಿರುವುದು ಅಪಾಯಕಾರಿ” ಎಂದು ಕೆಲವರು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ದೈನಂದಿನ ಜಂಜಾಟದ ನಡುವೆ ಬಸ್ ಚಾಲಕನ ಈ ಮಾನವೀಯ ಗುಣ ಅಂತರ್ಜಾಲದಲ್ಲಿ ಜನರ ಮನಸ್ಸು ಗೆದ್ದಿದ್ದು ಸುಳ್ಳಲ್ಲ.






















