ಬೆಂಗಳೂರು, ನ.29 www.bengaluruwire.com: ನಗರದ ವಾಣಿಜ್ಯ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ ಚಿಕ್ಕಪೇಟೆ, ಅವೆನ್ಯೂ ರಸ್ತೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ (ದಕ್ಷಿಣ ವಲಯ) ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಬರೋಬ್ಬರಿ ₹100 ಕೋಟಿ ಮೌಲ್ಯದ ತೆರಿಗೆ ವಂಚನೆಯ ವ್ಯವಹಾರ ಪತ್ತೆಯಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ (ದಕ್ಷಿಣ ವಲಯ) ಕಳೆದ 15 ದಿನಗಳಿಂದ ನಗರದ ಪ್ರಮುಖ ವ್ಯಾಪಾರ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಬಿವಿಕೆ ಅಯ್ಯಂಗಾರ್ ರಸ್ತೆ, ಅವೆನ್ಯೂ ರಸ್ತೆ, ಜೆ.ಸಿ.ರಸ್ತೆ, ಎಸ್.ಪಿ.ರಸ್ತೆ ಹಾಗೂ ಚಿಕ್ಕಪೇಟೆ ಪ್ರದೇಶಗಳಲ್ಲಿ ಅಧಿಕಾರಿಗಳು ರಹಸ್ಯವಾಗಿ ಗಸ್ತು ತಿರುಗಿ ಈ ಅಕ್ರಮ ಜಾಲವನ್ನು ಭೇದಿಸಿದ್ದಾರೆ.

ನಕಲಿ ಬಿಲ್‌ಗಳ ಹಾವಳಿ:
ನಗರದ ಹೃದಯ ಭಾಗದಲ್ಲಿರುವ ಈ ಪೇಟೆಗಳಲ್ಲಿ ಪ್ರತಿನಿತ್ಯ ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು, ಸ್ವಿಚ್‌ಗಳು, ಬಲ್ಬ್‌ಗಳು ಮತ್ತು ಯಂತ್ರೋಪಕರಣಗಳ ವಹಿವಾಟು ನಡೆಯುತ್ತದೆ. ಆದರೆ, ಬಹುತೇಕ ವ್ಯಾಪಾರಿಗಳು ಅಧಿಕೃತ ಜಿಎಸ್‌ಟಿ ಬಿಲ್ ನೀಡದೆ, ಕೇವಲ ನಕಲಿ ಬಿಲ್‌ಗಳನ್ನು (Estimates) ನೀಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ದೆಹಲಿ-ಚೀನಾ ನಂಟು:
ತೆರಿಗೆ ವಂಚನೆಯ ಈ ಜಾಲವು ದೆಹಲಿ ಮತ್ತು ಚೀನಾ ಮೂಲದವರೆಗೂ ಹಬ್ಬಿದೆ. ದೆಹಲಿ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿ ತಯಾರಾದ ಹಾಗೂ ಚೀನಾದಿಂದ ಆಮದು ಮಾಡಿಕೊಂಡ ಸರಕುಗಳನ್ನು ಜಿಎಸ್‌ಟಿ ಪಾವತಿಸದೆಯೇ ಬೆಂಗಳೂರಿಗೆ ತರಲಾಗುತ್ತಿದೆ. ಆಶ್ಚರ್ಯದ ಸಂಗತಿಯೆಂದರೆ, ಕಡ್ಡಾಯವಾಗಿರಬೇಕಾದ ಇ-ವೇ ಬಿಲ್ (E-way Bill) ಇಲ್ಲದೆಯೇ ಈ ಸರಕುಗಳು ಹಲವು ರಾಜ್ಯಗಳ ಗಡಿ ದಾಟಿ ಸುರಕ್ಷಿತವಾಗಿ ಬೆಂಗಳೂರು ತಲುಪಿವೆ. ಇದನ್ನು ಗಮನಿಸಿದರೆ ನಗರದ ಹಲವು ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಇನ್ನೂ ಹೆಚ್ಚಿನ ಜಿಎಸ್‌ಟಿ ತೆರಿಗೆ ಆಗುತ್ತಿರುವುದನ್ನು ಅಲ್ಲಗಳೆಯಲಾಗದು.
ಸಾವಿರಾರು ಟ್ರಕ್‌ಗಳ ಸರಕು:
“ಕಳೆದ 15 ದಿನಗಳಲ್ಲಿ ದಾಖಲೆಗಳಿಲ್ಲದ ಸರಕನ್ನು ಹೊತ್ತ ಸಾವಿರಾರು ಟ್ರಕ್ ಮತ್ತು ಮಿನಿ ಟ್ರಕ್‌ಗಳು ಪೇಟೆ ಪ್ರದೇಶಕ್ಕೆ ಬಂದಿವೆ. ಈ ಸರಕುಗಳ ಮೇಲಿನ ಅಂದಾಜು ಜಿಎಸ್‌ಟಿ ಮೊತ್ತವೇ ₹100 ಕೋಟಿ ದಾಟುತ್ತದೆ,” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರೈಲಿನಲ್ಲಿ ಬಂತು ಪಾನ್ ಮಸಾಲ:
ಅಂತರರಾಜ್ಯ ಸರಕು ಸಾಗಣೆ ಮೇಲೂ ನಿಗಾ ಇಟ್ಟಿರುವ ಇಲಾಖೆ, ಸರಿಯಾದ ದಾಖಲೆಗಳಿಲ್ಲದೆ ಕಬ್ಬಿಣದ ಸ್ಕ್ರಾಪ್ ಸಾಗಿಸುತ್ತಿದ್ದ 75ಕ್ಕೂ ಹೆಚ್ಚು ಸರಕು ವಾಹನಗಳನ್ನು ಜಪ್ತಿ ಮಾಡಿದೆ. ಈ ಸಂಬಂಧ ಈಗಾಗಲೇ ₹2.5 ಕೋಟಿ ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ, ಯಶವಂತಪುರ ರೈಲು ನಿಲ್ದಾಣದಲ್ಲಿ ದಾಖಲೆಗಳಿಲ್ಲದ 1,000 ಚೀಲ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ಪತ್ತೆಹಚ್ಚಲಾಗಿದೆ ಎಂದು ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಗುತ್ತಿಗೆದಾರರೊಂದಿಗೆ ಶಾಮೀಲು:
ನಿರ್ಮಾಣ ವಲಯದಲ್ಲೂ ಭಾರೀ ಅಕ್ರಮ ಪತ್ತೆಯಾಗಿದೆ. ಸಿಮೆಂಟ್, ಸ್ಟೀಲ್ ವ್ಯಾಪಾರಿಗಳು ಸರಕುಗಳನ್ನು ನೇರವಾಗಿ ಮನೆ ಕಟ್ಟುವ ಮಾಲೀಕರಿಗೆ (ಅಂತಿಮ ಗ್ರಾಹಕರಿಗೆ) ಬಿಲ್ ಇಲ್ಲದೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಲಾಭ ಪಡೆಯಲು ಗುತ್ತಿಗೆದಾರರಿಗೆ ಸರಕು ಸರಬರಾಜು ಮಾಡದೆಯೇ ಕೇವಲ ನಕಲಿ ಬಿಲ್‌ಗಳನ್ನು ನೀಡಿ ವಂಚಿಸುತ್ತಿರುವುದು ಬಯಲಿಗೆ ಬಂದಿದೆ.
ವಾರ್ಷಿಕ ₹40 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುತ್ತಿದ್ದರೂ ಜಿಎಸ್‌ಟಿ ನೋಂದಣಿ ಪಡೆಯದ ವ್ಯಾಪಾರಿಗಳಿಗೆ ಕಡ್ಡಾಯ ನೋಂದಣಿಗೆ ಎಚ್ಚರಿಕೆ ನೀಡಲಾಗಿದ್ದು, ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ಕನಿಷ್ಕ ತಿಳಿಸಿದ್ದಾರೆ.






















