ಉಡುಪಿ ನ.28 www.bengaluruwire.com : ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತವಾಗಿರುವ ಉಡುಪಿಯ ಶ್ರೀಕೃಷ್ಣ ಮಠವು ಶುಕ್ರವಾರ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡು, ಭಗವದ್ಗೀತೆಯ ಸಂದೇಶವು ಕೇವಲ ವ್ಯಕ್ತಿಗತ ಬದುಕಿಗೆ ಮಾತ್ರವಲ್ಲ, ರಾಷ್ಟ್ರದ ನೀತಿ ಮತ್ತು ಭದ್ರತೆಗೂ ದಿಕ್ಸೂಚಿಯಾಗಿದೆ ಎಂದು ಪ್ರತಿಪಾದಿಸಿದರು.

ಸುಮಾರು 800 ವರ್ಷಗಳ ಇತಿಹಾಸವಿರುವ ದ್ವೈತ ಸಿದ್ಧಾಂತದ ಉಗಮ ಸ್ಥಾನವಾದ ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ, ಉಡುಪಿಯ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ಮೂಲಕ ಜನರತ್ತ ಕೈಬೀಸುತ್ತಾ ಎಲ್ಲರಿಗೂ ಶುಭ ಕೋರಿದರು. ರಸ್ತೆ ಬದಿ ನಿಂತ ಸಾವಿರಾರು ಜನ ಮೋದಿಯವರಿಗೆ ಜೈಕಾರ ಹಾಕಿದರು. ಶ್ರೀಕೃಷ್ಣ ಮಠದಲ್ಲಿ ‘ಸುವರ್ಣ ತೀರ್ಥ ಮಂಟಪ’ವನ್ನು ಲೋಕಾರ್ಪಣೆ ಮಾಡಿದರು ಮತ್ತು ಭಕ್ತ ಕನಕದಾಸರಿಗೆ ಕೃಷ್ಣ ದರ್ಶನ ನೀಡಿದ ಪವಿತ್ರ ಕಿಂಡಿಗೆ ‘ಕನಕ ಕವಚ’ವನ್ನು ಅರ್ಪಿಸಿದರು.

ಒಂದು ಲಕ್ಷ ಕಂಠಗಳಲ್ಲಿ ಗೀತಾ ಘೋಷ :
ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸನ್ಯಾಸಿಗಳು, ವಿದ್ಯಾರ್ಥಿಗಳು, ವಿದ್ವಾಂಸರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಸುಮಾರು ಒಂದು ಲಕ್ಷ ಜನರು ಏಕಕಾಲದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಈ ದೈವಿಕ ವಾತಾವರಣವನ್ನು ಕಂಡು ಭಾವಪರವಶರಾದ ಪ್ರಧಾನಿ, “ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯಿಂದ ಮಾತ್ರ ಮೋಕ್ಷ ಸಾಧ್ಯ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಮೂಹಿಕವಾಗಿ ಗೀತಾ ಪಠಣ ನಡೆಯುತ್ತಿರುವುದು ವಿಶ್ವಕ್ಕೆ ಭಾರತದ ಸಾಂಘಿಕ ಪ್ರಜ್ಞೆಯ ಶಕ್ತಿಯನ್ನು ತೋರಿಸುತ್ತಿದೆ,” ಎಂದು ಬಣ್ಣಿಸಿದರು.


ದ್ವಾರಕೆ ಮತ್ತು ಉಡುಪಿಯ ನಂಟು :
ತಮ್ಮ ಹುಟ್ಟೂರಾದ ಗುಜರಾತ್ ಮತ್ತು ಉಡುಪಿಯ ನಡುವಿನ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಮೋದಿ, “ದ್ವಾರಕೆಯಲ್ಲಿ ರುಕ್ಮಿಣಿ ಪೂಜಿಸುತ್ತಿದ್ದ ಬಾಲಕೃಷ್ಣನ ವಿಗ್ರಹವನ್ನೇ ಮಧ್ವಾಚಾರ್ಯರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಇತ್ತೀಚೆಗೆ ನಾನು ಸಮುದ್ರದಾಳದಲ್ಲಿ ದ್ವಾರಕೆಯ ದರ್ಶನ ಪಡೆದಿದ್ದೆ, ಇಂದು ಇಲ್ಲಿ ಕೃಷ್ಣನ ದರ್ಶನ ಪಡೆದು ಧನ್ಯನಾಗಿದ್ದೇನೆ,” ಎಂದರು.
ರಾಷ್ಟ್ರ ರಕ್ಷಣೆಗೆ ‘ಸುದರ್ಶನ ಚಕ್ರ’ ಮಾದರಿ :
ಗೀತೆಯ ಬೋಧನೆಗಳನ್ನು ರಾಷ್ಟ್ರೀಯ ಭದ್ರತೆಗೆ ಜೋಡಿಸಿದ ಪ್ರಧಾನಿ, “ಶಾಂತಿ ಸ್ಥಾಪನೆಗೆ ಕೆಲವೊಮ್ಮೆ ಅಧರ್ಮವನ್ನು ಎದುರಿಸಿ ಅಂತ್ಯಗೊಳಿಸಬೇಕಾಗುತ್ತದೆ ಎಂಬುದು ಗೀತೆಯ ಸಾರ. ಇದೇ ತತ್ವ ನಮ್ಮ ಭದ್ರತಾ ನೀತಿಯ ಅಡಿಪಾಯವಾಗಿದೆ. ನಾವು ‘ವಸುಧೈವ ಕುಟುಂಬಕಂ’ ಎನ್ನುತ್ತೇವೆ, ಜೊತೆಗೆ ‘ಧರ್ಮೋ ರಕ್ಷತಿ ರಕ್ಷಿತಃ’ ಎಂದೂ ನಂಬುತ್ತೇವೆ. ಶತ್ರುಗಳು ದುಸ್ಸಾಹಸಕ್ಕೆ ಇಳಿದರೆ ಭಾರತದ ‘ಮಿಷನ್ ಸುದರ್ಶನ ಚಕ್ರ’ ಅವರನ್ನು ಸುಮ್ಮನೆ ಬಿಡುವುದಿಲ್ಲ. ಹೊಸ ಭಾರತವು ತನ್ನ ನಾಗರಿಕರ ರಕ್ಷಣೆಗೆ ಬದ್ಧವಾಗಿದೆ,” ಎಂದು ಎಚ್ಚರಿಕೆ ನೀಡಿದರು.

ಉಡುಪಿ: ಆಡಳಿತದ ಕರ್ಮಭೂಮಿ :
ಉಡುಪಿಯು ಜನಸಂಘ ಮತ್ತು ಬಿಜೆಪಿಯ ಆಡಳಿತ ಮಾದರಿಯ ಕರ್ಮಭೂಮಿ ಎಂದು ಸ್ಮರಿಸಿದ ಮೋದಿ, 1968ರಲ್ಲಿ ಜನಸಂಘದ ವಿ.ಎಸ್. ಆಚಾರ್ಯ ಅವರು ನಗರಸಭೆಗೆ ಆಯ್ಕೆಯಾಗುವ ಮೂಲಕ ಸ್ವಚ್ಛತೆ ಮತ್ತು ನೀರು ಪೂರೈಕೆಯ ಹೊಸ ಮಾದರಿಯನ್ನು ಪರಿಚಯಿಸಿದ್ದರು. ಅಂದು ಉಡುಪಿ ಹಾಕಿಕೊಟ್ಟ ದಾರಿ ಇಂದು ರಾಷ್ಟ್ರದ ಅಭಿವೃದ್ಧಿಯ ಭಾಗವಾಗಿದೆ ಎಂದು ಶ್ಲಾಘಿಸಿದರು.
ನಾಗರಿಕರಿಗೆ ಪ್ರಧಾನಿಯವರ ‘ಒಂಬತ್ತು ಸಂಕಲ್ಪಗಳು’ :
ಗೀತೆಯ ಕರ್ತವ್ಯ ಪ್ರಜ್ಞೆಯಿಂದ ಸ್ಫೂರ್ತಿ ಪಡೆದು ದೇಶದ ಅಭಿವೃದ್ಧಿಗಾಗಿ ಒಂಬತ್ತು ಸಂಕಲ್ಪಗಳನ್ನು ಕೈಗೊಳ್ಳುವಂತೆ ಪ್ರಧಾನಿ ನಾಗರಿಕರಿಗೆ ಕರೆ ನೀಡಿದರು:
* ಜಲ ಸಂರಕ್ಷಣೆ ಮತ್ತು ನದಿಗಳ ರಕ್ಷಣೆ.
* ವ್ಯಾಪಕ ವೃಕ್ಷಾರೋಪಣ (ಏಕ್ ಪೇಡ್ ಮಾ ಕೆ ನಾಮ್).
* ಬಡವರ ಜೀವನ ಸುಧಾರಣೆಗೆ ಸಹಾಯ.
* ಸ್ವದೇಶಿ ವಸ್ತುಗಳ ಬಳಕೆ ಮತ್ತು ‘ವೋಕಲ್ ಫಾರ್ ಲೋಕಲ್’.
* ನೈಸರ್ಗಿಕ ಕೃಷಿಗೆ ಉತ್ತೇಜನ.
* ಆರೋಗ್ಯಕರ ಜೀವನಶೈಲಿ ಮತ್ತು ಸಿರಿಧಾನ್ಯಗಳ ಬಳಕೆ.
* ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳುವುದು.
* ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ.
* ಕನಿಷ್ಠ 25 ಪಾರಂಪರಿಕ ತಾಣಗಳಿಗೆ ಭೇಟಿ ನೀಡುವುದು.
2047ರ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಕರ್ನಾಟಕದ ಜನತೆಯ ಪಾತ್ರ ಹಿರಿದು ಎಂದು ಪ್ರಧಾನಿ ತಮ್ಮ ಮಾತು ಮುಗಿಸಿದರು. ಉಡುಪಿ ಕೃಷ್ಣಮಠದಿಂದ ಆದಿ
ಉಡುಪಿಯಲ್ಲಿ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಹೆಚ್ಚು ಸಮಯ ಕಳೆದ ಪ್ರಧಾನಿಯವರು, ಎರಡುವರೆ ಗಂಟೆಗಳ ಪ್ರವಾಸ ಪೂರ್ಣಗೊಳಿಸಿ, ಉಡುಪಿಯ ಹೆಲಿಪ್ಯಾಡ್ ಗೆ ತೆರಳಿದರು. ಅಲ್ಲಿಂದ ಮಂಗಳೂರಿಗೆ ಹೊರಟು, ಅಲ್ಲಿಂದ ವಿಮಾನದಲ್ಲಿ ಗೋವಾ ಪರ್ತಗಾಳಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಉಡುಪಿಯ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಸೇರಿದಂತೆ ಅಷ್ಟಮಠಾಧೀಶರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. (Photos credit : X & Special Arrangements)






















