ಬೆಂಗಳೂರು, ನ.27 www.bengaluruwire.com : ಮುಂಗಾರು ಮಳೆಯ ಅಬ್ಬರಕ್ಕೆ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಬರೋಬ್ಬರಿ 14.24 ಲಕ್ಷ ರೈತರ ಖಾತೆಗಳಿಗೆ ಹೆಚ್ಚುವರಿಯಾಗಿ ಒಟ್ಟು ₹1,033.60 ಕೋಟಿ ಇನ್‌ಪುಟ್ ಸಬ್ಸಿಡಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಬಟನ್ ಒತ್ತುವ ಮೂಲಕ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ (DBT) ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಸಿಎಂ, ಕೇಂದ್ರದ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಿಂತಲೂ ಹೆಚ್ಚಿನ ನೆರವನ್ನು ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ನೀಡುತ್ತಿದೆ ಎಂದು ತಿಳಿಸಿದರು.
ಹೆಕ್ಟೇರ್‌ಗೆ ಪರಿಹಾರ ಎಷ್ಟು? (ಪರಿಷ್ಕೃತ ದರ) :
ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಇನ್‌ಪುಟ್ ಸಬ್ಸಿಡಿ ದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತವಾಗಿ ಪರಿಹಾರ ಸಿಗಲಿದ್ದು, ವಿವರ ಹೀಗಿದೆ:

* ಮಳೆಯಾಶ್ರಿತ ಬೆಳೆ: ಪ್ರತಿ ಹೆಕ್ಟೇರ್‌ಗೆ ₹8,500 ರಿಂದ ₹17,000 ಕ್ಕೆ ಏರಿಕೆ.
* ನೀರಾವರಿ ಬೆಳೆ: ಪ್ರತಿ ಹೆಕ್ಟೇರ್‌ಗೆ ₹17,000 ದಿಂದ ₹25,500 ಕ್ಕೆ ಏರಿಕೆ.
* ಬಹುವಾರ್ಷಿಕ ಬೆಳೆ: ಪ್ರತಿ ಹೆಕ್ಟೇರ್‌ಗೆ ₹22,500 ರಿಂದ ₹31,000 ಕ್ಕೆ ಏರಿಕೆ.
ಒಟ್ಟು ₹2,251 ಕೋಟಿ ಜಮೆ :
ನಿಯಮಗಳ ಪ್ರಕಾರ ಕೇಂದ್ರದ ಎಸ್‌ಡಿಆರ್‌ಎಫ್ ಅಡಿಯಲ್ಲಿ ಈಗಾಗಲೇ 14.24 ಲಕ್ಷ ರೈತರಿಗೆ ₹1,218.03 ಕೋಟಿ ವಿತರಿಸಲಾಗಿದೆ. ಈಗ ರಾಜ್ಯ ಸರ್ಕಾರ ತನ್ನ ಪಾಲಿನ ‘ಟಾಪ್ ಅಪ್’ ಆಗಿ ₹1,033.60 ಕೋಟಿಯನ್ನು ನೀಡುತ್ತಿದೆ. ಒಟ್ಟಾರೆಯಾಗಿ ರೈತರ ಖಾತೆಗಳಿಗೆ ₹2,251.63 ಕೋಟಿ ಜಮೆಯಾಗಲಿದೆ ಎಂದು ಸಿಎಂ ವಿವರಿಸಿದರು.
ಯಾವ ಜಿಲ್ಲೆಗಳಲ್ಲಿ ಹೆಚ್ಚು ಹಾನಿ?
ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೊಯ್ಲಿಗೆ ಬಂದಿದ್ದ ಬೆಳೆ ಮಳೆಪಾಲಾಗಿದೆ. ಕೃಷ್ಣಾ ಮತ್ತು ಭೀಮಾ ನದಿಗಳ ಒಳಹರಿವು ಹೆಚ್ಚಿದ್ದರಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ.
ಅಂಕಿ-ಅಂಶಗಳ ನೋಟ:
* ಒಟ್ಟು ಬಿತ್ತನೆ ಪ್ರದೇಶ: 82.56 ಲಕ್ಷ ಹೆಕ್ಟೇರ್.
* ಹಾನಿಯಾದ ಪ್ರದೇಶ: 14.58 ಲಕ್ಷ ಹೆಕ್ಟೇರ್.
* ಅಂದಾಜು ನಷ್ಟ: ₹10,748 ಕೋಟಿ.
* ಪ್ರಮುಖ ಬೆಳೆ ಹಾನಿ: ತೊಗರಿ (5.36 ಲಕ್ಷ ಹೆಕ್ಟೇರ್), ಹತ್ತಿ (2.68 ಲಕ್ಷ ಹೆಕ್ಟೇರ್).
ಬೆಳೆ ಹಾನಿ ಪರಿಹಾರಕ್ಕೆ ಕೇಂದ್ರದತ್ತ ಚಿತ್ತ :
ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಸಿಎಂ, ಬೆಳೆ ಹಾನಿ ಪರಿಹಾರಕ್ಕೆ ₹614.90 ಕೋಟಿ ಹಾಗೂ ಮೂಲಸೌಕರ್ಯ ಮರುಸ್ಥಾಪನೆಗೆ ₹1,521.67 ಕೋಟಿ ಪ್ಯಾಕೇಜ್ ಕೋರಿದ್ದಾರೆ. ಶೀಘ್ರದಲ್ಲೇ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಸಿಎಂ ತಿಳಿಸಿದರು.






















