ಪೆಹಲ್ಗಾಮ್, (ಜಮ್ಮು ಮತ್ತು ಕಾಶ್ಮೀರ) ನ.22 www.bengaluruwire.com : ಜಮ್ಮು ಮತ್ತು ಕಾಶ್ಮೀರ ಕಣಿವೆ ರಾಜ್ಯದ ಪಹಲ್ಗಾಮ್ ನಲ್ಲಿ ಕನ್ನಡದ ಕಂಪನ್ನು, ಸಾಂಸ್ಕೃತಿಯ ಹಿರಿಮೆಯನ್ನು ಎತ್ತಿಹಿಡಿದು ಕನ್ನಡಿಗರ ಸ್ವಾಭಿಮಾನವನ್ನು ಕಾಶ್ಮೀರಿಗರಿಗೆ ತಿಳಿಸುವಲ್ಲಿ ಗ್ರೇಟರ್ ಬೆಂಗಳೂರ ಪ್ರಾಧಿಕಾರ ನಗರಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಸಂಘವು, ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಹಾಗೂ ದುರ್ಘಟನೆಯಲ್ಲಿ ಹತರಾದವರಿಗೆ ನುಡಿನಮನ ಕಾರ್ಯಕ್ರಮ ನಡೆಸಿಕೊಡುವಲ್ಲಿ ಯಶಸ್ವಿಯಾಯಿತು.
ಡೋಲು ಬಡಿಯುವ ಮೂಲಕ ಗಣ್ಯರೆಲ್ಲರೂ ಅದ್ಧೂರಿಯಾಗಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನವೆಂಬರ್ ತಿಂಗಳ ಇಲ್ಲಿನ ರಕ್ತಹೆಪ್ಪುಗಟ್ಟುವ ಕೊರೆಯುವ ಚಳಿಯಲ್ಲೂ ಪಹಲ್ಗಾಮ್ ಕ್ಲಬ್ ನಲ್ಲಿ ನಿರ್ಮಿಸಿದ್ದ ದೊಡ್ಡ ಡೇರೆಯಲ್ಲಿ ಗಾಯಕಿ ಭಾಗ್ಯಶ್ರೀ ಅವರು ಮತ್ತು ಗಾಯಕಿ ಅನುರಾಧ ಭಟ್ ಅವರ “ಗೊಂಬೆ ಹೇಳುತೈತೆ…ಮತ್ತೆ ಹೇಳುತೈತೆ…ನೀನು ರಾಜಕುಮಾರ” ಹಾಡಿಗೆ ಪಾಲಿಕೆ ಅಧಿಕಾರಿ ನೌಕರರು ಮೊಬೈಲ್ ಟಾರ್ಚ್ ಹಾಕಿ, ಹಾಡಿಗೆ ಕೋರಸ್ ನಲ್ಲಿ ಹಾಡಿ ಸಾಥ್ ನೀಡಿದರು.

ಕೆ.ಎಸ್.ನರಸಿಂಹಮೂರ್ತಿಯವರ “ದೀಪವೂ ನಿಮ್ಮದೆ…ಗಾಳಿಯೂ ನಿನ್ನದೇ” ಯಂತಹ ಹಲವು ಭಾವಗೀತೆ, “ಕನ್ನಡ ನಾಡಿನ ಜೀವನದಿ ಕಾವೇರಿ” ಯಂತಹ ಹಲವು ಕನ್ನಡ ಚಲನಚಿತ್ರ ಗೀತೆಗಳು ನೆರದಿದ್ದ 350ಕ್ಕೂ ಹೆಚ್ಚು ಸಂಘದ ಸದಸ್ಯರ ಮನಸ್ಸು, ಅವರ ನರನಾಡಿಗಳಲ್ಲಿ ಕನ್ನಡಾಭಿಮಾನ ಮೂಡಿಸುವಲ್ಲಿ ಸಫಲವಾಯಿತು.


ಡಾ.ರಾಜ್ ಕುಮಾರ್ ಮತ್ತು ಮಂಜುಳ ಅವರ ಅಭಿನಯದ ಎರಡು ಕನಸು ಚಲನಚಿತ್ರದ “ಎಂದೆಂದೂ ನಿನ್ನನು ಮರೆತು ಬದುಕಿರಲಾರೆನು” ಎಂಬ ಗೀತೆಗೆ ಪಾಲಿಕೆ ನಗರ ಯೋಜನೆ ಅಧಿಕಾರಿ ತಿಪ್ಪೇಶ್ ದಂಪತಿಗಳು ಅವರ ನೃತ್ಯವು ಎಲ್ಲರ ಗಮನ ಸೆಳೆಯಿತು.

ಜನಪದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದು ಚಂದ್ರು ಅವರ ನೇತೃತ್ವದ ಡೊಳ್ಳು ಕುಣಿತದ ತಂಡ. ಯಕ್ಷಗಾನ ಬಾಲ ಕಲಾವಿದರು ಕೆಲ ಕಾಲ ಯಕ್ಷಗಾನ ನೃತ್ಯವನ್ನು ಮನಮೋಹಕವಾಗಿ ಪ್ರದರ್ಶಿಸಿದರು.

ಆದಿಕವಿ ಪಂಪ ಅವರನ್ನು ನೆನೆಸಿಕೊಂಡು ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥರಾದ ಆರತಿ ಹೆಚ್.ಎನ್ ಅವರು ಪ್ರಾರಂಭಿಕವಾಗಿ ಮಾತನಾಡಿ, ಕಾಶ್ಮೀರ ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ವಿವರಿಸುತ್ತಾ, ಕಾಶ್ಮೀರದ ಪಂಡಿತರು ಕಾಲಕ್ರಮೇಣ ಕೊಂಕಣದ ಪರಶುರಾಮ ಕ್ಷೇತ್ರದಲ್ಲಿ ಹೇಗೆ ನೆಲೆಸಿದರು ಎಂಬುದನ್ನು ವಿವರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಆರ್.ಸಂಪತ್ ರಾಜ್ ರವರು ಮಾತನಾಡಿ, ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವವನ್ನು ದೇಶದ ಸ್ವಿಜರ್ ಲ್ಯಾಂಡ್ ಎಂದೆನಿಸಿದ ಜಮ್ಮು ಮತ್ತು ಕಾಶ್ಮೀರದ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಐತಿಹಾಸಿಕ ಕ್ಷಣ. ಕಾಶ್ಮೀರ ದೇಶದ ಮುಕುಟಪ್ರಾಯವಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವದ ಹೂಡಿಕೆದಾರರು ಭಾರತದಲ್ಲಿ ಮೊದಲು ನೋಡುವುದು ದೆಹಲಿಯಲ್ಲ, ಬೆಂಗಳೂರನ್ನು ಎಂಬ ಮಾತನ್ನು ನೆನಪಿಸಿಕೊಂಡರು. ಉಗ್ರವಾದದಿಂದ ಭಯದ ವಾತಾವರಣವಿದ್ದರೂ ಪಹಲ್ಗಾಮ್ ನಲ್ಲಿ ಜಿಬಿಎ ಅಧಿಕಾರಿ ಮತ್ತು ನೌಕರರ ಸಂಘದ ಸದಸ್ಯರು ಇಲ್ಲಿಗೆ ಆಗಮಿಸಿ ಕಾರ್ಯಕ್ರಮ ಆಯೋಜಿಸಿದ ಕನ್ನಡದ ಕೆಚ್ಚದೆಯ ವ್ಯಕ್ತಿಗಳು ಎಂದರು.
ಪೆಹಲ್ಗಾಮ್ ನಲ್ಲಿ ಯಶಸ್ವೀ ಕಾರ್ಯಕ್ರಮದ ಮೂಲಕ ದೇಶಕ್ಕೆ ಸಂದೇಶ ರವಾನೆಯಾಗಿದೆ :
ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಏ.22ರಂದು ಭಯೋತ್ಪಾದಕರು ನಮ್ಮ ದೇಶದ ಪೆಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ನಡೆಸಿದ ನರಮೇಧದಿಂದ ಸಾಕಷ್ಟು ದುಖಃ ಹಾಗೂ ಇಲ್ಲಿನ ನೆಲದಲ್ಲಿ ಪ್ರವಾಸಿಗರಿಗೆ ಭಯದ ವಾತಾವರಣ ನಿರ್ಮಾಣ ಮಾಡುವ ಅವರ ಉದ್ದೇಶದ ಬಗ್ಗೆ ಸಾಕಷ್ಟು ಕೋಪವಿತ್ತು. ಹಾಗಾಗಿ ಆಗಲೇ ಈ ಬಾರಿ ಪೆಹಲ್ಗಾಮ್ ನಲ್ಲಿ ಸಂಘದ ವತಿಯಿಂದ ರಾಷ್ಟ್ರಮಟ್ಟದ ಕನ್ನಡ ರಾಜ್ಯೋತ್ಸವವನ್ನು ನಡೆಸಲು ತೀರ್ಮಾನಿಸಿ ಅದರಂತೆ ಅದನ್ನು ನ.22ರಂದು ಯಶಸ್ವಿಗೊಳಿಸಿದ್ದೇವೆ” ಎಂದು ಅವರು ಹೇಳಿದರು.

“ಇದರ ಯಶಸ್ಸು ಸಂಘದ ಪ್ರತಿಯೊಬ್ಬ ಸದಸ್ಯರು, ಪೆಹಲ್ಗಾಮ್ ಪೊಲೀಸರು, ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಮತ್ತಿತರಿಗೆ ಸಲ್ಲುತ್ತದೆ. ಕೆಚ್ಚೆದೆಯ ಕನ್ನಡಿಗರು ಯಾರಿಗೂ ಹೆದರದೆ ಇಲ್ಲಿ ಕಾರ್ಯಕ್ರಮ ನಡೆಸಿ ಇಡೀ ದೇಶಕ್ಕೆ ಇಲ್ಲಿನ ಸುರಕ್ಷತೆಯ ಪ್ರವಾಸೋದ್ಯಮದ ಬಗ್ಗೆ ಸಂದೇಶ ರವಾನೆಯಾದಂತಾಗಿದೆ” ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಪ್ರಧಾನ ಭಾಷಣ ಮಾಡುತ್ತಾ, ಏ.22 ರಂದು ಪೆಹಲ್ಗಾಮ್ ನಲ್ಲಿ 26 ರಂದು ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಅಮಾಯಕರ ಮೃತಪಟ್ಟವರಿಗಾಗಿ ನುಡಿನಮನ ಹಾಗೂ ಅವರ ಕುಟುಂಬದವರಲ್ಲಿ ಭರವಸೆ ಮೂಡಿಸಲು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಚರಿಸಿ ಇತಿಹಾಸದ ಪುಟ ಸೇರಿತು. ಇದೇ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದ್ದು ನಿಜಕ್ಕೂ ಯತೋಚಿತವಾಗಿದೆ. ಕನ್ನಡದ ಕಾರ್ಯಕ್ರಮ ಇಲ್ಲಿ ಯಶಸ್ವಿಯಾಗುವ ಮೂಲಕ ದೇಶಕ್ಕೆ ಪೆಹಲ್ಗಾಮ್ ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂಬ ಸಂದೇಶ ರವಾನಿಸಿದಂತಾಗಿದೆ ಎಂದರು.

ಮಾಜಿ ಮೇಯರ್ ಗೌತಮ್ ಮಾತನಾಡಿ, ವ್ಯವಸ್ಥಿತವಾಗಿ ಪ್ರಥಮ ಬಾರಿಗೆ 2022ರಲ್ಲಿ ಕಾಶಿಯಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ 2023ರಲ್ಲಿ ನೇಪಾಳದ ಪಶುಪತಿ ದೇವಾಲಯ ಸನ್ನಿಧಾನದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು 2024ರಲ್ಲಿ ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈಗ ನಾಲ್ಕನೇ ಬಾರಿ ರಾಜ್ಯದ ಹೊರಗೆ ಯಶಸ್ವಿಯಾಗಿ ಪೆಹಲ್ಗಾಮ್ ನಲ್ಲಿ ಕನ್ನಡದ ಕಂಪನ್ನು ಹರಿಸಿದ್ದಾರೆ. ಸಂಘದ ಅಧ್ಯಕ್ಷ ಅಮೃತ್ ರಾಜ್ ನೇತೃತ್ವದಲ್ಲಿ ರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಹಾಗೂ ಪೆಹಲ್ಗಾಮ್ ನಲ್ಲಿ ಮಡಿದವರಿಗೆ ನುಡಿನಮನ ಕೈಗೊಳ್ಳಲಾಗಿದೆ. ಇದು ಹೆಮ್ಮೆಯ ವಿಷಯ ಎಂದರು.
ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗರವರು, ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಕರ್ನಾಟಕದ ಹೊರಗೆ ಕನ್ನಡದ ರಾಜ್ಯೋತ್ಸವವನ್ನು ಆಯೋಜಿಸುವ ಅವಶ್ಯಕತೆ ಬಗ್ಗೆ ಹಿಂದೆ ಕರ್ನಾಟಕ ಪ್ರವಾಸೋದ್ಯಮ ನಿಗಮದ ಹಿರಿಯ ಅಧಿಕಾರಿಗಳು ಆ ಬಗ್ಗೆ ಪ್ರಶ್ನಿಸಿದ್ರು. ಅವರಿಗೆ ಈಗ ಉತ್ತರ ಸಿಕ್ಕಿದೆ. ದೇಶದಲ್ಲಿ ಮೊದಲ ಬಾರಿಗೆ ಅಧಿಕೃತ ಬಾವುಟ, ಅಧಿಕೃತ ನಾಡಗೀತೆ ಆಗಿರೋದು ಕನ್ನಡದಲ್ಲಿ. ಕನ್ನಡ ನಾಡಿನ ಶಕ್ತಿ, ಸೌಂದರ್ಯ ಹಾಗೂ ಪ್ರಕೃತಿ ಸೊಬಗಿನ ಬಗ್ಗೆ ಹೊರ ರಾಜ್ಯದ ಮಾಲ್ ಗಳಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಚುರಪಡಿಸಬೇಕಿದೆ ಎಂದರು.
ಪಹಲ್ಗಾಮ್ ಕೃತ್ಯ ನಡೆಸಿದ ಭಯೋತ್ಪಾಕರ ನೀಚಕೃತ್ಯ ಹೇಯವಾದದ್ದು. ನಮ್ಮ ದೇಶದ ಸೇನೆ “ಆಪರೇಷನ್ ಸಿಂಧೂರ” ಮೂಲಕ ಭಯೋತ್ಪಾದಕರಿಗೆ ಉತ್ತರ ನೀಡಿದೆ. ಕರ್ನಾಢಕದ ಗಡಿಭಾಗದಲ್ಲಿ ಕನ್ನಡದಿಂದ ವಂಚಿತವಾಗುವುದನ್ನು ತಪ್ಪಿಸಲು ರಾಜ್ಯಸರ್ಕಾರ ಇತರ ಭಾಷೆಗಳನ್ನು ನಿಲ್ಲಿಸಿ, ಕನ್ನಡಕ್ಕೆ ಶಾಲೆಗಳಲ್ಲಿ ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಕೀಲರಾದ ವಿ.ಶ್ರೀನಿವಾಸ್ ಮಾತನಾಡಿ, ನಮ್ಮ ಜಿಬಿಎ ಪಾಲಿಕೆ ನೌಕರರ ಸಂಘ ಕನ್ನಡ ರಾಜ್ಯೋತ್ಸವ ಆಚರಿಸಿದಂತೆ ಇತರ ರಾಜ್ಯಗಳು ಕಾಶ್ಮೀರದಲ್ಲಿ ಕಾರ್ಯಕ್ರಮ ಆಯೋಜಿಸಿ ಕಾಶ್ಮೀರ ಭಾರತದ ಅಂಗ ಎಂಬ ಸಂದೇಶ ರವಾನಿಸಿಬೇಕು ಎಂದು ಕರೆ ನೀಡಿದರು, ಲಗಾಯಕಿ ಅನುರಾಧ ಭಟ್ ಮಾತನಾಡಿದರು.
ಪೆಹಲ್ಗಾಮ್ ಡಿವೈಎಸ್ ಪಿ ಪೆಹಲ್ಗಾಮ್ ಫಾರೂಕ್, ಇಲ್ಲಿನ ಕಾರ್ಯಕ್ರಮ ಬಹಳ ಸೊಗಸಾಗಿತ್ತು. ಪಹಲ್ಗಾಮ್ ಬಲಿಯಾದವರಿಗೆ ನುಡಿನಮನ ಆಯೋಜಿಸಿದ್ದಕ್ಕಾಗಿ ತಮಗೆಲ್ಲಾ ಅಭಿನಂದನೆ. ನಾವು ಪೊಲೀಸರು ಭದ್ರತೆಗೆ ಫೀಲ್ಡ್ ನಲ್ಲಿದ್ದರೂ, ಈ ಕಾರ್ಯಕ್ರಮ ನಮ್ಮ ಮನಸೂರೆಗೊಂಡಿತು. ಹಾಗಾಗಿ ಇಂತಹ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿದ್ದೇನೆ ಎಂದರು.
ಇನ್ಸೆಪೆಕ್ಟರ್ ಪರ್ವೇಜ್ ಅಹ್ಮದ್, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






















