ಬೆಂಗಳೂರು, ನ.21 www.bengaluruwire.com : ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಹೊಸದಾಗಿ ರಚನೆಯಾದ ಒಂದು ವಾರ್ಡ್‌ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರ ಆಕಾಶ್ ಅವರ ಹೆಸರನ್ನು ಇಡಲಾಗಿದೆ ಎಂಬ ವಿಷಯ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಈ ನಾಮಕರಣದ ವಿರುದ್ಧ ಸ್ಥಳೀಯ ಶಾಸಕ ಎಸ್.ಆರ್. ವಿಶ್ವನಾಥ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ವಾರ್ಡ್‌ಗೆ ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ಯಲಹಂಕ ವ್ಯಾಪ್ತಿಯಲ್ಲಿ ಪುನರ್ವಿಂಗಡಣೆಯಾಗಿರುವ 3ನೇ ವಾರ್ಡ್‌ಗೆ ‘ಆಕಾಶ್ ವಾರ್ಡ್’ ಎಂದು ಹೆಸರಿಸಲಾಗಿದೆ ಎಂಬುದು ಶಾಸಕ ವಿಶ್ವನಾಥ್ ಅವರ ಆರೋಪ. ಈ ಕುರಿತು ಆಕ್ರೋಶಭರಿತ ಪ್ರಶ್ನೆಗಳನ್ನು ಎತ್ತಿರುವ ಅವರು, “ಯಾರು ಈ ಆಕಾಶ್? ನಾಮಕರಣ ಮಾಡುವಷ್ಟು ಅವರ ಸಾಧನೆ ಏನು? ಸಮಾಜಕ್ಕೆ ಅವರ ಕೊಡುಗೆ ಏನು?” ಎಂದು ಪ್ರಶ್ನಿಸಿದ್ದಾರೆ.
ಮರುನಾಮಕರಣಕ್ಕೆ ಒತ್ತಾಯ:

ಈ ವಿವಾದಾತ್ಮಕ ಹೆಸರನ್ನು ತೆಗೆದುಹಾಕಿ, ಆ ವಾರ್ಡ್‌ಗೆ ವೆಂಕಟಾಲ ವಾರ್ಡ್ ಅಥವಾ ಮಾರುತಿ ನಗರ ವಾರ್ಡ್ ಎಂದು ಮರುನಾಮಕರಣ ಮಾಡಬೇಕು ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಅವರು ಪಾಲಿಕೆ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆದಾಗ್ಯೂ, ಈ ರೀತಿ ಹೆಸರಿಡಲು ಡಿ.ಕೆ. ಶಿವಕುಮಾರ್ ಅವರು ಖಂಡಿತಾ ಒಪ್ಪುವುದಿಲ್ಲ ಎಂಬ ವಿಶ್ವಾಸವನ್ನು ಸಹ ಶಾಸಕರು ವ್ಯಕ್ತಪಡಿಸಿದ್ದಾರೆ.
ಇತರ ವಾರ್ಡ್‌ಗಳ ತಿದ್ದುಪಡಿಗೂ ಆಗ್ರಹ:
ಅಲ್ಲದೆ, ಯಲಹಂಕದ 1ನೇ ವಾರ್ಡ್‌ಗೆ ರಾಜ ಕೆಂಪೇಗೌಡ ವಾರ್ಡ್ ಹಾಗೂ 2ನೇ ವಾರ್ಡ್‌ಗೆ ಚೌಡೇಶ್ವರಿ ವಾರ್ಡ್ ಎಂದು ಸೂಕ್ತ ತಿದ್ದುಪಡಿ ಮಾಡುವಂತೆ ಸಹ ಎಸ್.ಆರ್. ವಿಶ್ವನಾಥ್ ಅವರು ಒತ್ತಾಯಿಸಿದ್ದಾರೆ. ಒಟ್ಟಾರೆಯಾಗಿ ಬಿಬಿಎಂಪಿ ವಾರ್ಡ್‌ಗಳ ನಾಮಕರಣ ಪ್ರಕ್ರಿಯೆ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.






















